QR Code Business Card

ಶಿಕ್ಷಕರೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ ಸಂವಾದ

ಪ್ರಕೃತಿಯ ಮೇಲೆ ಬೀಳುವ ಅಸಮರ್ಪಕ ಒತ್ತಡ ಮಾನವ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಾಕೃತಿಕ ಸಂಪನ್ಮೂಲಗಳ ಸಮರ್ಪಕ ವಿನಿಯೋಗ ಸಾರ್ವತ್ರಿಕ ಪ್ರಗತಿಯನ್ನು ಸಮತೋಲನಗೊಳಿಸುತ್ತದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಅವರು ದಿನಾಂಕ 11-04-2015 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರೊಂದಿಗೆ ಸಂವಾದ ನಡೆಸುತ್ತಾ ಮಾತನಾಡುತ್ತಿದ್ದರು.

IMG-20150411-WA0022-1-1

ದೇಶದ ಪ್ರಗತಿಯ ವಿಚಾರ ಬಂದಾಗ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿರಿಸಿ ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ದೇಶದ ರಕ್ಷಣಾ ಕಾರ್ಯದಲ್ಲಿ ಅನವರತ ಶ್ರಮಿಸುವ ಸೈನಿಕರು ನಮಗೆ ಪ್ರಾತಃಸ್ಮರಣೀಯರು ಎಂದು ಅವರು ಹೇಳಿದರು. ಶಾಲಾ ಶಿಕ್ಷಕರು ನೇತ್ರಾವತಿ ನದಿ ತಿರುವು, ಪಶ್ಚಿಮ ಘಟ್ಟ ಉಳಿಸಿ, ಭೂ ಮಸೂದೆ, ಎನ್.ಸಿ.ಸಿ. ಇತ್ಯಾದಿ ವಿಚಾರಗಳ ಕುರಿತಾಗಿ ಸಂಸದರೊಂದಿಗೆ ಚರ್ಚಿಸಿದರು. ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ರವೀಂದ್ರ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಶ್ರೀ ಸತೀಶಕುಮಾರ್ ರೈ ವಂದಿಸಿದರು. ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಸಂವಾದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.