ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇದರ 2015-16 ನೇ ಶೈಕ್ಷಣಿಕ ಸಾಲಿನ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ದಿನಾಂಕ 18-03-2016 ನೇ ಶುಕ್ರವಾರ ಶಾಲಾ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಡಾ. ಕೃಷ್ಣ ಭಟ್ ಕೆ. ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾರ್ಜನೆಯು ಉದ್ಯೋಗಕ್ಕೆ ಮಾತ್ರ ಸೀಮಿತವಾಗದೆ, ಸಮಾಜವನ್ನು ತಿದ್ದುವ ಮತ್ತು ನಮ್ಮ ಕಿರಿಯರಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕೆಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷಿ ಯೋಜನೆ ’ಯಶಸ್’ ಇದರ ನಿರ್ದೇಶಕರಾದ ವಿಶ್ವೇಶ್ವರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳು ಶಾಲೆಯಿಂದ ಹೊರ ಹೋಗುವಾಗ ಒಂದು ಶಕ್ತಿಯನ್ನು ತುಂಬಿಕೊಂಡು ಹೋಗುತ್ತಾರೆ. ಅಂತಹ ಶಕ್ತಿ, ಸ್ಪೂರ್ತಿ ಸಮಾಜಕ್ಕೆ ಹರಡುವುದು ಮುಖ್ಯ, ಆ ಮೂಲಕ ನಮ್ಮ ಭಾರತದ ಅಪೇಕ್ಷೆಯನ್ನು ಈಡೇರಿಸುವುದು ಮುಖ್ಯ ಎಂದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ರವೀಂದ್ರ ಪಿ., ಶಾಲಾ ರಕ್ಷಕ-ಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ವಿ.ಜಿ.ಭಟ್ ಉಪಸ್ಥಿತರಿದ್ದರು.
10 ನೇ ತರಗತಿಯ ಶಾಲಾ ನಾಯಕ 9 ನೇ ತರಗತಿ ವಿದ್ಯಾರ್ಥಿಗಳಿಗೆ ದೀಪಾಂಜಲಿ ಹಸ್ತಾಂತರಿಸಿ ಕೊನೆಯ ಶಾಲಾ ದಿನವನ್ನು ಆಚರಿಸಿದರು. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆಯೊಂದಿಗೆ ವಿಶೇಷ ರೀತಿಯಲ್ಲಿ ವಿದಾಯ ಕಾರ್ಯಕ್ರಮ ಆಚರಿಸಲಾಯಿತು. ಅನರ್ಘ್ಯ ನಾಡಿಗ್ ಸ್ವಾಗತಿಸಿ, ಸಾತ್ವಿಕ್ ಪಿ. ಎಸ್. ವಂದಿಸಿದರು. ಲಹರಿ ನೆಲ್ಲಿತ್ತಾಯ ಮತ್ತು ಪ್ರತೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.