ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇದರ ವಿವೇಕಾನಂದ ಸ್ಕೌಟ್ಸ್ ಮತ್ತು ನಿವೇದಿತಾ ಗೈಡ್ಸ್ ತಂಡಗಳ ಒಂದು ದಿನದ ಚಾರಣವು ಕಲ್ಮಡ್ಕ ಗ್ರಾಮದ ಚಾಮಡ್ಕದಲ್ಲಿ ನವೆಂಬರ್ 6 ರಂದು ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಯಶಸ್ ವಿಭಾಗದ ಕಾರ್ಯದರ್ಶಿ ಮುರಳಿಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಚಾರಣವು ಒಂದು ರೀತಿಯ ಅಧ್ಯಯನವಿದ್ದಂತೆ. ನಗರ ವಾಸಿಗಳಾದ ಕೆಲವರು ಹಳ್ಳಿಯ ಕೃಷಿ ಚಟುವಟಿಕೆ, ಭಾರತೀಯ ಸಂಸ್ಕೃತಿ, ಹಳ್ಳಿಯ ಸೊಗಡನ್ನು ಮತ್ತು ಪರಿಸರದ ಅಧ್ಯಯನವನ್ನು ಇಂದು ಮಾಡಲು ಈ ಚಾರಣ ಸಹಕಾರಿ ಎಂದರು.
ಕಲ್ಮಡ್ಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಉದಯಕುಮಾರ್ ಬೆಟ್ಟ ಮಾತನಾಡಿ ಕಲ್ಮಡ್ಕ ಪರಿಸರದಲ್ಲಿ ಮುಗ್ಧತೆ ಮತ್ತು ಸಮಾಜಮುಖಿ ಚಿಂತನೆಯ ವ್ಯಕ್ತಿಗಳು ಇದ್ದಾರೆ. ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಾಗಿ ದುಡಿಯುವ ವಿಚಾರಗಳನ್ನು ಕೇಳಿ ತಿಳಿದುಕೊಂಡು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ವೇದಿಕೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ಕೆ.ಜಿ.ವಿಭಾಗದ ಮುಖ್ಯಸ್ಥೆ ಮಮತಾ, ಸ್ಕೌಟ್ ಶಿಕ್ಷಕ ಮಂಜುನಾಥ್.ಬಿ, ಗೈಡ್ ಶಿಕ್ಷಕಿ ಅನುರಾಧ ಉಪಸ್ಥಿತರಿದ್ದರು. ಸ್ಕೌಟ್ ಅವನೀತ್ ಸ್ವಾಗತಿಸಿ, ಮಯೂರು ವಂದಿಸಿ, ರಾಹುಲ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು ೭೦ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಕಲ್ಮಡ್ಕದಿಂದ ಚಾಮಡ್ಕದವರೆಗೆ ೭ ಕಿ.ಮೀ ಚಾರಣ ನಡೆಸಿದರು.