QR Code Business Card

ಶ್ರೀ ವೆಂಕಟೇಶ್ವರ ಅಮೈ – ಶ್ರದ್ಧಾಂಜಲಿ ಸಭೆ

ದಿನಾಂಕ 24-2-2019 ನೇ ಆದಿತ್ಯವಾರ ಮುಂಜಾನೆ ಅಗಲಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ಅವರ ಗೌರವಪೂರ್ವಕವಾಗಿ ಶಾಲಾ ಸಭಾಂಗಣದಲ್ಲಿ ದಿನಾಂಕ 25-2-2019 ನೇ ಸೋಮವಾರ ಬೆಳಿಗ್ಗೆ 9.30 ಕ್ಕೆ ಗಣ್ಯರ ಸಮ್ಮುಖದಲ್ಲಿ ಶ್ರದ್ದಾಂಜಲಿಯನ್ನು ಅರ್ಪಿಸಿಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧಕರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ವೆಂಕಟೇಶ್ವರ ಅಮೈಯವರು ಒಬ್ಬ ಶ್ರಮಜೀವಿಯಾಗಿ ಸಂಘ ನೀಡಿದ ಯಾವುದೇ ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದರು. ಸದಾ ಉತ್ಸಾಹದ ಚಿಲುಮೆಯಂತಿದ್ದ ಅವರು ಸಿಟ್ಟು ಮಾಡಿಕೊಂಡದ್ದೆ ಕಾಣಲಿಲ್ಲ. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಅನ್ನುವಂತೆ ತಮ್ಮ ಸಾವಿನಲ್ಲೂ ಸಾರ್ಥಕತೆಯನ್ನು ಪಡೆದವರು. ಅವರು ಹುಟ್ಟು ಶ್ರೀಮಂತರಲ್ಲ, ಕಷ್ಟದಲ್ಲಿ ಜೀವನವನ್ನು ಸಾಗಿಸಿದವರು ಆದರೆ ಎಂದು ಕೂಡ ಅದನ್ನು ತೋರ್ಪಡಿಸಿದವರಲ್ಲ. ಅಂತಹ ವ್ಯಕ್ತಿಯನ್ನು ಅಗಲಿದ್ದು ನಿಜಕ್ಕೂ ಶೋಕಾನೀಯವಾದುದು ಎಂದು ಹೇಳಿದರು. ವಿವೇಕಾನಂದ ಆಡಳಿತ ಮಂಡಳಿಯ ಸದಸ್ಯರಾದ ಭಿರ್ಮಣ್ಣ ಗೌಡ ಮಾತನಾಡಿ ವೆಂಕಟೇಶ್ವರ ಅಮೈಯವರು ಒಬ್ಬ ಸರಳ ಸಜ್ಜನ ವ್ಯಕ್ತಿ, ಎಲ್ಲರೊಂದಿಗೆ ಬೇರೆಯುವ ಅವರು ಯಾರಿಗೂ ನೋವನ್ನು ಉಂಟು ಮಾಡಿದವರಲ್ಲ, ಅವರ ನಡವಳಿಕೆಯನ್ನು ನಾವು ಅಳವಡಿಸಿಕೊಂಡರೆ ಅವರಿಗೆ ನೀಡುವ ನಿಜವಾದ ಶ್ರದ್ದಾಂಜಲಿ ಎಂದು ಹೇಳಿದರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್ ಅವರು ಶೋಕಗೀತೆಯನ್ನು ಹಾಡಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೆ.ಎಂ.ಕೃಷ್ಣ ಭಟ್, ನಿರ್ದೇಶಕರಾದ ಶ್ರೀ ಶಿವಪ್ರಸಾದ್ ಇ., ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ಮುರಳೀಧರ.ಕೆ, ಆಡಳಿತ ಮಂಡಳಿ ಸದಸ್ಯರಾದ ಡಾ.ಸುರೇಶ್ ಪುತ್ತೂರಾಯ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ.ಶಶಿಧರ ಕಜೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಶಾಲಾ ಆಡಳಿತ ಮಂಡಳಿ ಸದಸ್ಯರು, ನರೇಂದ್ರ ಪಿ.ಯು. ಕಾಲೇಜಿನ ಮತ್ತು ವಿವೇಕಾನಂದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದ, ಶಾಲೆಯ ಪೋಷಕ ಪ್ರತಿನಿಧಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಶಾಂತಿ ಮಂತ್ರದೊಂದಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿದ ನಂತರ ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದ ಮತ್ತು ಶಾಲಾ ವಿದ್ಯಾರ್ಥಿಗಳು ಪುಷ್ಪನಮನ ಅರ್ಪಿಸಿದರು.