ದಿನಾಂಕ 17-10-2019 ನೇ ಗುರುವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟ -ವಿವೇಕ ಕ್ರೀಡಾ ಸಂಭ್ರಮ 2019 ರ ಉದ್ಘಾಟನಾ ಸಮಾರಂಭವು ನಡೆಯಿತು.
ಉದ್ಘಾಟನಾ ಸಮಾರಂಭದ ಧ್ವಜರೋಹಣ ಗೈದು ಗೌರವ ವಂದನೆ ಸ್ವೀಕರಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಇವರು ಮಾತನಾಡಿ ನಮ್ಮ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷವಾಗಿದೆ. ತಾಲೂಕಿನ ಕ್ರೀಡಾರ್ಥಿಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಲಿ. ಅತ್ಲೇಟಿಕ್ಸ್ನಲ್ಲಿ ಪಿ.ಟಿ.ಉಷಾ ರಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವ ಪ್ರಯತ್ನವನ್ನು ನಮ್ಮ ತಾಲೂಕಿನ ಮಕ್ಕಳು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದಾಗ ಭಾರತ ಸೂಪರ್ ಪವರ್ ದೇಶವಾಗುವುದು. ಒಂದು ದೇಶದ ಆರ್ಥಿಕತೆ ವೈಜ್ಞಾನಿಕತೆ ಹಾಗೂ ಕ್ರೀಡಾ ಸಾಧನೆಗಳು ಆ ದೇಶವನ್ನು ಉತ್ತುಂಗ ಶಿಖರಕ್ಕೆ ಏರಿಸುತ್ತದೆ. ಅಬ್ದುಲ್ ಕಲಾಂ ಹೇಳಿದಂತೆ ಸಾಧಿಸಬೇಕು ಎಂಬ ಛಲ ಬರಬೇಕಾದರೆ ಸೂರ್ಯ ಪ್ರಖರ ಕಿರಣಗಳನ್ನು ನೋಡಿ ಆಗ ನಿಮ್ಮಲ್ಲಿ ಉತ್ಸಾಹ ಮೂಡುತ್ತದೆ. ಈ ನಿಟ್ಟಿನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಆಯೋಜಿಸಿರುವ ತಾಲೂಕು ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಅಧ್ಯಕ್ಷೀಯ ಮಾತಿನಲ್ಲಿ ಹೇಳಿದರು.
ತಾಲೂಕು ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಮಾತನಾಡಿ ವಿವೇಕಾನಂದ ವಿದ್ಯಾಸಂಸ್ಥೆಯು ತಾಲೂಕು ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯವಾದುದು. ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾಗಿ ಸೀರೆ ಉಟ್ಟು ಪೇಟ ಧರಿಸಿದ ವಿದ್ಯಾರ್ಥಿಗಳ ಪಥಸಂಚಲನ ಖಂಡಿತ ನಮ್ಮ ಭವ್ಯ ಭಾರತದ ನಿರ್ಮಾಣಕ್ಕೆ ನಾಂದಿ ಹಾಡಲಿ ಎಂದು ಹೇಳಿದರು.
ಕಾರ್ಯಕ್ರಮ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿದ ಪುತ್ತೂರು ತಾಲೂಕು ಪಂಚಾಯತ್ನ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್ ಮಾತನಾಡಿ ತಾಲೂಕಿನ ಎಲ್ಲಾ ಕ್ರೀಡಾರ್ಥಿಗಳು ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟದಲ್ಲಿ ಪುತ್ತೂರು ತಾಲೂಕಿನ ಹೆಸರನ್ನು ಮೂಡಿಸಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ದ.ಕ.ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅನಿತಾ ಹೇಮನಾಥ ಶೆಟ್ಟಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ, ಇದೀಗ ಬೆಂಗಳೂರಿನ ಆಯುಕ್ತರ ಕಚೇರಿಗೆ ವರ್ಗಾವಣೆಯಾದ ಶ್ರೀ ವೈ.ಶಿವರಾಮಯ್ಯ ಅವರನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪುತ್ತೂರು ತಾಲೂಕಿನ ವಿವಿಧ ಶಿಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಸಂಸ್ಕಾರ, ಸಂಸ್ಕೃತಿ ಆಚಾರ ವಿಚಾರಗಳು ಉತ್ತಮ ಭಾರತೀಯ ಪ್ರಜೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. ಅನಂತರ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶಿವರಾಮ ಏನೆಕಲ್ರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪುತ್ತೂರು ನಗರ ಸಭಾ ಸದಸ್ಯರಾದ ಶ್ರೀಮತಿ ಯಶೋಧ ಹರೀಶ್, ಪುತ್ತೂರು ಪುತ್ತೂರು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀ ಮೋನಪ್ಪ, ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಶ್ರೀ ಸುಂದರ ಗೌಡ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಶಿವಪ್ರಕಾಶ್ ಹಾಗೂ ಸಂಚಾಲಕರಾದ ಶ್ರೀ ಮುರಳೀಧರ.ಕೆ, ತಾಲೂಕು ಕ್ರೀಡಾಕೂಟದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ.ವಿಶ್ವಾಸ್ ಶೆಣೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ನಿರೀಕ್ಷಿತ್ ರೈ ಹಾಗೂ ಗೌರವಾನ್ವಿತ ಜಿಲ್ಲಾ ಪಂಚಾಯತ್ ಹಾಗೂ ನಗರ ಸಭಾ ಸದಸ್ಯರು ಹಾಗೂ ಜಿಲ್ಲಾ ಮತ್ತು ತಾಲೂಕು ಶಿಕ್ಷಕರ ಸಂಘದ ಗೌರವಾನ್ವಿತ ಅಧ್ಯಕ್ಷರು, ಕಾರ್ಯದರ್ಶಿಗಳು, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಗ್ಗೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿಷ್ಣುಪ್ರಸಾದ್ ಪ್ರಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಸ್ವಾಗತಿಸಿ, ವಿದ್ಯಾರ್ಥಿನಿಯರು ಪ್ರಾರ್ಥಿಸಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಆರ್.ಸಿ ನಾರಾಯಣ ವಂದಿಸಿ, ಶಿಕ್ಷಕರಾದ ಶ್ರೀ ಗಣೇಶ್ ಏತಡ್ಕ, ಶ್ರೀಮತಿ ಪದ್ಮಲಕ್ಷ್ಮೀ ಮತ್ತುಶ್ರೀಮತಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಕರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ, ಪೋಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಸಹಕರಿಸಿದರು.