ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್, ತೆಂಕಿಲ ಪುತ್ತೂರು ಇವುಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ನ ಅಧ್ಯಕ್ಷರಾದ ಪ್ರೋ. ಎ.ವಿ ನಾರಾಯಣರವರು ಮಾತನಾಡಿ ಯೋಗ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಿಂದೆ ಸಾಮೂಹಿಕ ಯೋಗ ದಿನಾಚರಣೆಯನ್ನು ಮಾಡುತ್ತಿದ್ದೆವು. ಆದರೆ ಪ್ರಸ್ತುತ COVID-19 ರ ಪರಿಣಾಮವಾಗಿ ಮನೆಗಳಲ್ಲಿ ಆಚರಿಸಬೇಕೆಂದು ಶ್ರೀಯುತ ನರೇಂದ್ರ ಮೋದಿಜಿಯವರು ಕರೆ ನೀಡಿದ್ದಾರೆ. ಪ್ರತೀ ಶಾಲೆಯಲ್ಲಿ ಈ ಯೋಗವನ್ನು ನಿರ್ವಹಿಸಿದರೆ ಮಕ್ಕಳಲ್ಲಿ ದೃಢತೆ ಹೆಚ್ಚುವುದು ಎಂದರು.
ಸಭಾದ್ಯಕ್ಷತೆ ವಹಿಸಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಎಂ ಇವರು ಮಾತನಾಡಿ ಭಾರತದ ಪರಂಪರೆಯಾದ ಯೋಗವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೂರಿರುವುದು ಸೌಭಾಗ್ಯವೇ ಸರಿ. ಯೋಗ ಒಂದು ದಿನಕ್ಕೆ ಸೀಮಿತವಾಗದೆ ಅನುದಿನವು ಜೀವನದ ಸಂಗಾತಿಯಾಗಲಿ, ಯೋಗವು ಕೇವಲ ಪ್ರದರ್ಶನವಾಗದೆ ದರ್ಶನ ಯೋಗವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಇವರು ಉಪಸ್ಥತರಿದ್ದರು. ಶಿಕ್ಷಕಿಯಾದ ಶ್ರೀಮತಿ ಸಂಗೀತಾ ಪ್ರಾರ್ಥಿಸಿ, ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಇದರ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಆಶಾ ಶೆಟ್ಟಿ ವಂದಿಸಿದರು. ಶ್ರೀಮತಿ ಸೌಮ್ಯ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ನಮಿತಾ ಇವರ ಮಾರ್ಗದರ್ಶನದಲ್ಲಿ ಶಿಕ್ಷಕ ಶಿಕ್ಷಕೇತರ ವೃಂದದವರಿಂದ ಸಾಮೂಹಿಕ ಯೋಗದ ವಿವಿಧ ಆಯಾಮಗಳ ಪ್ರದರ್ಶನ ನಡೆಯಿತು.