74ನೇ ಸ್ವಾತಂತ್ರ್ಯದಿನಾಚರಣೆಯನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಎ.ವಿ.ನಾರಾಯಣರವರು ನೆರವೇರಿಸಿದರು. ನಂತರ ಮಾತನಾಡಿದ ಅವರು ’ಕೋವಿಡ್-19 ರ ಈ ಸಂದರ್ಭದಲ್ಲಿ ಅತ್ಯಂತ ಸರಳವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಆದರೂ ದೇಶದ ಪ್ರಗತಿಯಲ್ಲಿ ನಾವೆಲ್ಲರೂ ಕೈಜೋಡಿಸುವುದು ಅನಿವಾರ್ಯವಾಗಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ನಮ್ಮ ದೇಶ ಮುಂದುವರಿಯಲು ನಾವೆಲ್ಲರೂ ಸರಕಾರಕ್ಕೆ ಸಹಕಾರವನ್ನು ನೀಡಬೇಕು. 1720, 1820, 1920 ನೇ ಇಸವಿಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಉದ್ಭವಿಸಿದ್ದು ಇಂದೂ ಸಹ 2020 ರಲ್ಲಿ ಈ ಪರಿಸ್ಥಿತಿ ಮುಂದುವರಿದಿರುವುದು ಆಶ್ಚರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ| ಶಿವಪ್ರಕಾಶ್ರವರು ’ನಮ್ಮ ದೇಶ ಆತ್ಮನಿರ್ಭರತೆಯ ಕಡೆಗೆ ಸಾಗುತ್ತಿದ್ದು ಏಕರಾಷ್ಟ್ರ, ಶ್ರೇಷ್ಟ ರಾಷ್ಟ್ರ ಎಂಬ ಕಲ್ಪನೆ ನಮ್ಮಲ್ಲಿರಲಿ’ ಎಂದು ಹಾರೈಸಿದರು.
ವೇದಿಕೆಯಲ್ಲಿ ಸಂಚಾಲಕರಾದ ಶ್ರೀ ಮುರಳೀಧರ ಕೆ., ಸದಸ್ಯರಾದ ಶ್ರೀ ಚಂದ್ರಶೇಖರ್, ಶ್ರೀ ಹರೇಕೃಷ್ಣ ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ. ಆರ್.ಸಿ. ನಾರಾಯಣರವರು ಉಪಸ್ಥಿತರಿದ್ದರು. ಅದೇ ರೀತಿ ಶಾಲಾ ಮುಖ್ಯ ಗುರುಗಳಾದ ಶ್ರೀ ಸತೀಶ್ ಕುಮಾರ್ ರೈ, ಶ್ರೀಮತಿ ಸಂಧ್ಯಾ, ಶ್ರೀಮತಿ ಮಮತಾ ಹಾಗೂ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಡಾ| ಶೋಭಿತಾ ಸತೀಶ್ ಹಾಗೂ ಶಿಕ್ಷಕ, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ಶಿಕ್ಷಕಿಯರು ರಾಷ್ಟ್ರಗೀತೆ ಹಾಗೂ ಧ್ವಜಗೀತೆಯನ್ನು ಹಾಡಿ, ದೈಹಿಕ ಶಿಕ್ಷಕಿ ಶ್ರೀಮತಿ ವಾಣಿಶ್ರೀರವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಶ್ರೀ ಭಾಸ್ಕರ್, ಶ್ರೀ ಗಿರೀಶ್, ಶ್ರೀಮತಿ ಆಶಾ ಸಹಕರಿಸಿದರು.