ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ಒಂದಿಲ್ಲೊಂದು ರೀತಿಯಲ್ಲಿ ದೇಶಕ್ಕೆ ತನ್ನದೇ ಶೈಲಿಯಲ್ಲಿ ಸೇವೆ ಸಲ್ಲಿಸಿದಾಗ ಅವರ ಜನ್ಮ ಸಾರ್ಥಕವೆನಿಸುತ್ತದೆ ಎಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಬೇದಾರ್ ವಸಂತ ಕುಂಟ್ಯಾನ ಹೇಳಿದರು. ಅವರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ನರೇಂದ್ರ ಪದವಿಪೂರ್ವ ಕಾಲೇಜು ಮತ್ತು ವಿವೇಕಾನಂದ ಬಿ.ಎಡ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವ ಆಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ನಾಲ್ಕೂ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಬಿ.ಎಡ್ ಶಿಕ್ಷಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರು ಪೂರ್ಣ ಕಾರ್ಯಕ್ರಮದ ಉಸ್ತುವಾರಿ ವ್ಯವಸ್ಥೆ ನಿರ್ವಹಿಸಿದರು. ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶಾನುಭೋಗ್ ಸ್ವಾಗತಿಸಿ, ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ಬೆಳ್ಳಾರೆ ವಂದಿಸಿದರು. ಶ್ರೀಮತಿ ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸೇನಾ ನಿವೃತ್ತ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರು ದೇಶದ ಸೈನ್ಯ, ಅಲ್ಲಿನ ವಿವಿಧ ವಿಭಾಗಗಳ ಚಟುವಟಿಕೆಗಳು, ಸೈನ್ಯಕ್ಕೆ ಸೇರಿ ದೇಶಸೇವೆ ಸಲ್ಲಿಸುವ ವಿವಿಧ ಹಂತಗಳ ಕುರಿತು ಮಾಹಿತಿ ನೀಡಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಗೀತಾ. ಡಿ ರೈ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುಬೇದಾರ್ ವಸಂತ ಕುಂಟ್ಯಾನ ಉಪಸ್ಥಿತರಿದ್ದರು. ಶ್ರೀಮತಿ ಅನುರಾಧ ಮತ್ತು ಶ್ರೀ ರಾಧಾಕೃಷ್ಣ ರೈ ಕಾರ್ಯಕ್ರಮ ನಿರ್ವಹಿಸಿದರು.