QR Code Business Card

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಪುರಸ್ಕೃತ ರಾಕೇಶ್‌ಕೃಷ್ಣರಿಗೆ ಶಾಲೆಯಲ್ಲಿ ಸನ್ಮಾನ

ದಿನಾಂಕ 27-1-2021 ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಪುರಸ್ಕೃತ ರಾಕೇಶ್‌ಕೃಷ್ಣರಿಗೆ ಸನ್ಮಾನ  ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.

ಪ್ರಶಸ್ತಿ ಪುರಸ್ಕೃತ ರಾಕೇಶ್‌ಕೃಷ್ಣರನ್ನು ಸನ್ಮಾನಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|| ಪ್ರಭಾಕರ್ ಭಟ್ ಕಲ್ಲಡ್ಕ ಇವರು ಮಾತನಾಡಿ, ಇನ್ನೂ ಇದರಲ್ಲೇ ಸಾಧನೆ ಮಾಡಿದರೆ ದೇಶದ ಹಿತ ಕಾಪಾಡುವುದರ ಜೊತೆಗೆ ಜಗತ್ತಿನ ಹಿತ ಕಾಪಾಡಬಹುದು. ಇದು ದೇಶದ ಘನತೆಯನ್ನು ಹೆಚ್ಚಿಸುತ್ತದೆ. ರಾಕೇಶ್‌ಕೃಷ್ಣನ ಸಾಧನೆಗೆ ಬೀಜ ಬಿತ್ತಿದ್ದು ವಿವೇಕಾನಂದ ಸಂಸ್ಥೆ, ಇಲ್ಲಿನ ಮುಖ್ಯಗುರುಗಳು ಹಾಗೂ ಶಿಕ್ಷಕರು ಎಂದರು. ಪ್ರತೀ ಮಕ್ಕಳಲ್ಲಿ ಅಡಗಿರುವ ಪ್ರತಿಭೆ, ಚೈತನ್ಯಗಳನ್ನು ಹುಡುಕಿ, ಬೆಳೆಯಲು ಪೂರಕವಾದ ಪ್ರೇರಣೆ ಸಂಸ್ಥೆ ನೀಡುತ್ತಿದೆ ಎಂದರು.

ದೇಶಕ್ಕಾಗಿ ನಿರಂತರ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸಂವಾದ ನನಗೆ ಪ್ರೇರಣೆ ನೀಡಿದೆ, ಪ್ರಾಥಮಿಕದಿಂದ ಪ್ರೌಢಶಾಲೆ ತನಕ ನನಗೆ ಪ್ರೇರಣೆ ಸ್ಪೂರ್ತಿ ನೀಡಿದ ಶಿಕ್ಷಣ ಸಂಸ್ಥೆಗೆ ನಾನು ಆಭಾರಿ ಎಂದು ಸನ್ಮಾನ ಸ್ವೀಕರಿಸಿದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಪುರಸ್ಕೃತ ರಾಕೇಶ್‌ಕೃಷ್ಣ ಹೇಳಿದನು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಲೋಕೇಶ್. ಸಿ ಯವರು ಮಾತನಾಡಿ ವಿದ್ಯಾರ್ಥಿಯ ಸಾಧನೆ ಅದ್ಭುತ. ಶಿಕ್ಷಕರು ಮನಸ್ಸು ಮಾಡಿದರೆ ಅದ್ಭುತ ಪ್ರತಿಭೆಗಳನ್ನು ದೇಶಕ್ಕೆ ನೀಡಬಹುದು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಇಲ್ಲಿನ ಮುಖ್ಯಗುರುಗಳು ಹಾಗೂ ಶಿಕ್ಷಕರು ಇದಕ್ಕೆ ಉತ್ತಮ ಉದಾಹರಣೆ ಎಂದರು. ಸಾಧನೆಯು ಇಷ್ಟಕ್ಕೆ ನಿಲ್ಲದೆ ನಿರಂತರವಾಗಿರಲಿ. ಉತ್ತಮ ಭವಿಷ್ಯ ನಿನ್ನದಾಗಿರಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|| ಶಿವಪ್ರಕಾಶ್ ವಿದ್ಯಾರ್ಥಿಯ ಸಾಧನೆಯನ್ನು ಪ್ರಶಂಸಿಸಿ, ಇನ್ನೂ ಸಾಧನೆ ಮಾಡಬೇಕು ಎಂದು ಪ್ರೋತ್ಸಾಹದ ಮಾತನಾಡಿದರು.

ರಾಕೇಶ್‌ಕೃಷ್ಣರ ತಂದೆ ಶ್ರೀ ರವಿಶಂಕರ್, ನೆಕ್ಕಿಲ ಇವರು ಮಾತನಾಡಿ ತನ್ನ ಮಗನ ಸಾಧನೆಯನ್ನು ಪ್ರಶಂಸಿಸಿದರು ಹಾಗೂ ಸಾಧನೆಯ ಹಾದಿಯಲ್ಲಿ ಅವರು ನಡೆದು ಬಂದ ದಾರಿ, ಅನುಭವ, ಕಷ್ಟಸಹಿಷ್ಣುತೆ, ಇತರರ ಸಹಕಾರ ಕೊನೆಗೆ ದೊರೆತ ಸಂತೋಷವನ್ನು ಹಂಚಿಕೊಂಡರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಇಲ್ಲಿನ ಮುಖ್ಯಗುರುಗಳು ಹಾಗೂ ಶಿಕ್ಷಕರು ಅವನ ಈ ಸಾಧನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು ಎಂದು ಸ್ಮರಿಸಿಕೊಂಡರು. ದೇಶದ ಮಾನ್ಯ ಪ್ರಧಾನಿಯವರೊಂದಿಗಿನ ಸಂವಾದದ ಕುರಿತು ಅಭಿಮಾನದಿಂದ ಹೇಳಿಕೊಂಡರು.

ಸನ್ಮಾನ ಸಮಾರಂಭದಲ್ಲಿ ರಾಕೇಶ್‌ಕೃಷ್ಣರಿಗೆ ಶಾಲು ಹೊದಿಸಿ ಫಲವಿತ್ತು, ಹಾರಹಾಕಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾರ ಹಾಕಿ ಸನ್ಮಾನಿಸಿದರು. ಇದರೊಂದಿಗೆ ಶಾಲಾವತಿಯಿಂದ ಸನ್ಮಾನ ಪತ್ರವನ್ನು ನೀಡಲಾಯಿತು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ|| ಕೆ ಎಂ ಕೃಷ್ಣ ಭಟ್, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬಿರ್ಮಣ್ಣಗೌಡ, ಸಂಚಾಲಕರಾದ ಶ್ರೀ ಮುರಳೀಧರ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಮತಿ ಗೀತಾ ಡಿ ರೈ, ರಾಕೇಶ್‌ಕೃಷ್ಣರ ತಾಯಿ ಶ್ರೀಮತಿ ಡಾ|| ದುರ್ಗಾರತ್ನ ಇವರು ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ಸುಜಾತ ಪ್ರಾರ್ಥನೆ ಮಾಡಿ ಹಾಡಿದರು. ಶ್ರೀಮತಿ ಸಾಯಿಗೀತಾ ಸ್ವಾಗತಿಸಿದರು. ಮುಖ್ಯಗುರು ಶ್ರೀ ಸತೀಶ್‌ಕುಮಾರ್ ರೈ ಪ್ರಾಸ್ತಾವಿಕ ಮಾತನ್ನಾಡಿದರು. ಶಿಕ್ಷಕಿ ಶ್ರೀಮತಿ ಯಶೋದಾ ವಿದ್ಯಾರ್ಥಿಯ ಕುರಿತು ಸ್ವರಚಿತ ಕವನ ವಾಚಿಸಿದರು. ಶಿಕ್ಷಕಿ ಶ್ರೀಮತಿ ರೇಖಾ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ದೀಪ್ತಿ ವಂದಿಸಿದರು.