1857 ರಲ್ಲಿ ಮಂಗಲ್ ಪಾಂಡೆಯಿಂದ ಜ್ವಲಿಸಲ್ಪಟ್ಟ ಕ್ರಾಂತಿಯ ಕಿಡಿ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನಗಳ ಫಲವಾಗಿ ೯೦ವರ್ಷಗಳ ಬಳಿಕ ಸ್ವಾತಂತ್ರ್ಯ ಜ್ವಾಲೆಯಾಗಿ ಜಗತ್ತಿನಲ್ಲಿ ಪ್ರಜ್ವಲಿಸಿದ ಸ್ವಾತಂತ್ರ್ಯ ದೀವಿಗೆಯನ್ನು ಜತನದಿಂದ ಉಳಿಸಬೇಕು. ದೇಶಭಕ್ತರ, ಸೈನಿಕರ ಬಲಿದಾನವನ್ನು ಸದಾ ಸ್ಮರಿಸಬೇಕು ಎಂದು ಭಾರತೀಯ ಸೇನೆಯ ನಿವೃತ್ತ ಸೈನಿಕರಾದ ಸುಬೇದಾರ ಸಂಜೀವರವರು ಹೇಳಿದರು. ಅವರು ದಿನಾಂಕ 15-8-2021 ನೇ ರವಿವಾರದಂದು ವಿವೇಕಾನಂದ ವಿದ್ಯಾಸಂಸ್ಥೆಗಳ ಜಂಟಿ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣಗೈದು, ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶಿವಪ್ರಕಾಶ್.ಎಂ, ಅಧ್ಯಕ್ಷೀಯ ನೆಲೆಯಲ್ಲಿ ಶುಭ ಹಾರೈಸಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ನರೇಂದ್ರ ಪದವಿಪೂರ್ವ ಕಾಲೇಜು, ವಿವೇಕಾನಂದ ಬಿ.ಎಡ್ ಕಾಲೇಜುಗಳ ಅಧ್ಯಕ್ಷರು, ಸಂಚಾಲಕರು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಉಪನ್ಯಾಸಕರು, ಶಿಕ್ಷಕ, ಶಿಕ್ಷಕೇತರ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಆಶಾ ಬೆಳ್ಳಾರೆ ಸ್ವಾಗತಿಸಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಿತಾ ಸತೀಶ್ ವಂದಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿಯರು ವಂದೇಮಾತರಂ ಮತ್ತು ಬಿ.ಎಡ್ ಶಿಕ್ಷಕ ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಹಾಗೂ ಧ್ವಜಗೀತೆಯನ್ನು ಹಾಡಿದರು. ಶಿಕ್ಷಕಿ ಕು.ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕರು ಸಹಕರಿಸಿದರು.
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಚಿತ್ರಕಲಾ ಶಿಕ್ಷಕ ಶ್ರೀ ಚೇತನ್.ಕೆ.ವಿಟ್ಲ ಇವರ ನೇತೃತ್ವದಲ್ಲಿ ಶಿಕ್ಷಕರ ತಂಡದಿಂದ ಅನುಪಾತದ ಅನುಸಾರ ರಾಷ್ಟ್ರಧ್ವಜದ ಬೃಹತ್ ರಂಗೋಲಿಯನ್ನು ರಚಿಸಲಾಯಿತು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ೭೫ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.