QR Code Business Card

ಕನ್ನಡ ರಾಜ್ಯೋತ್ಸವ ಹಾಗೂ ‘ಸಾಹಿತ್ಯ ಸೌರಭ’ ಪುಸ್ತಕ ಬಿಡುಗಡೆ ಸಮಾರಂಭ

ದಿನಾಂಕ 1-11-2021 ನೇ ಸೋಮವಾರ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಯಾಧವಶ್ರೀ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಹಿತ್ಯ ಸೌರಭ ಪುಸ್ತಕ ಬಿಡುಗಡೆ ಹಾಗೂ ಸಾಹಿತ್ಯ ಚಟುವಟಿಕೆಗಳ ವೇದಿಕೆ ಸಾಹಿತ್ಯ ಸೌರಭ ಉದ್ಘಾಟನಾ ಸಮಾರಂಭವು ನಡೆಯಿತು. ಮಕ್ಕಳ ಮತ್ತು ಶಿಕ್ಷಕರ ಸಾಹಿತ್ಯವನ್ನು ಒಳಗೊಂಡ ಕಿರು ಹೊತ್ತಗೆ ಸಾಹಿತ್ಯ ಸೌರಭದ ಬಿಡುಗಡೆ ಹಾಗೂ ಸಾಹಿತ್ಯ ಸಂಘಗಳ ಭಿತ್ತಿ ಫಲಕವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್‌ರವರು “ಮಕ್ಕಳಲ್ಲಿ ಸಾಹಿತ್ಯದ ಕಿಚ್ಚನ್ನು ಹೊತ್ತಿಸುವ ಕೆಲಸಗಳು ಆಗಬೇಕು. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರಿಂದ ತಮ್ಮ ಶಬ್ದ ಭಂಡಾರಗಳನ್ನು ಹೆಚ್ಚಿಸಿ ಹೊಸ ಹೊಸ ಕವನ, ಕಥೆ, ಲೇಖನಗಳನ್ನು ಬರೆಯಬಹುದು. ಮಕ್ಕಳಲ್ಲಿ ಇಂದು ನಾವು ಸಾಹಿತ್ಯ ಅಭಿರುಚಿಯನ್ನು ಮೂಡಿಸಿದರೆ ಅದರ ಫಲ ಮುಂದಿನ ದಿನಗಳಲ್ಲಿ ಪಡೆಯಬಹುದು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಹರೇಕೃಷ್ಣರವರು “ಮನಸ್ಸಿದ್ದರೆ ಮಾರ್ಗ ಅನ್ನುವಂತೆ ಸಾಹಿತ್ಯರಚನೆಗೆ ಮಕ್ಕಳಲ್ಲಿ ಬರೆಯುವ ಮನಸ್ಸು ಅತ್ಯಗತ್ಯ. ನಾವು ಎಲ್ಲೆ ಹೋದರು ದೇಶಾಭಿಮಾನ ಹಾಗು ಭಾಷಾಭಿಮಾನವನ್ನು ಬಿಡಬಾರದು. ಅದೇ ರೀತಿ ಇತರ ಭಾಷೆಗಳ ಬಗ್ಗೆ ಕೂಡ ಒಳ್ಳೆಯ ಅಭಿಪ್ರಾಯವಿರಲಿ” ಎಂದು ಹೇಳಿದರು.

ಕಾರ್ಯಕ್ರಮದ ಮೊದಲು ವಿದ್ಯಾರ್ಥಿ, ವಿದ್ಯಾರ್ಥಿನಿಯ ತಂಡದಿಂದ ಕನ್ನಡಗೀತೆಗಳ ಗೀತಾ ಸೌರಭ ಬಹಳ ಮನೋಜ್ಞವಾಗಿ ಮೂಡಿ ಬಂತು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಪುಷ್ಪಲತಾ ಬಿ.ಕೆ, ಶ್ರೀಮತಿ ಮಧುರ ಜೋಶಿ, ಶ್ರೀಮತಿ ಮಾಲಿನಿ, ಶ್ರೀಮತಿ ಸಾಯಿಗೀತಾ, ಶ್ರೀಮತಿ ಪ್ರೇಮಾಶಂಕರ್, ಶ್ರೀ ಚೇತನ್ ವಿಟ್ಲ, ಶಾಲಾ ವಿದ್ಯಾರ್ಥಿ ಸಂಘದ ನಾಯಕ ಆತ್ಮೀಯ ಕಶ್ಯಪ್, ಉಪನಾಯಕಿ ಕುಮಾರಿ ಇಂದುಶ್ರೀ, ಸಾಂಸ್ಕೃತಿಕ ಸಂಘದ ಪ್ರತಿನಿಧಿ ಕುಮಾರಿ ಮೇಘ ನಾಯಕ್ ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರುಗಳು ಪ್ರಸ್ತಾವಿಕ ಮಾತುಗಳನ್ನಾಡಿ, ಶಿಕ್ಷಕ ಗಣೇಶ್‌ ಏತಡ್ಕ, ಸ್ವಾಗತಿಸಿ, ಶಿಕ್ಷಕ ಮಹೇಶ್ ವರ್ಮಾ ವಂದಿಸಿ, ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ, ಶಿಕ್ಷಕಿಯರಾದ ಶ್ರೀಮತಿ ಆಶಾ ಕೆ. ಮತ್ತು ಶ್ರೀಮತಿ ಅನುರಾಧ ಕಾರ್ಯಕ್ರಮ ನಿರ್ವಹಿಸಿದರು.