ಪುತ್ತೂರು: ಪುತ್ತೂರು ಎಸೋಸಿಯೇಶನ್ ಸಿವಿಲ್ ಇಂಜಿನಿಯರ್‍ಸ್ ಮತ್ತು ವಿವೇಕಾನಂದ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜಲಸಂರಕ್ಷಣಾ ಕಾರ್ಯಾಗಾರ ನಡೆಯಿತು.
ಡಾ. ಕೆ.ಎಂ. ಕೃಷ್ಣ ಭಟ್ ಅಧ್ಯಕ್ಷರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು, ಪ್ರಪಂಚದಲ್ಲಿ ಅತೀ ಹೆಚ್ಚು ಮಳೆ ಬೀಳುವ ದೇಶ ಭಾರತ, ಇಂತಹ ದೇಶದಲ್ಲಿ ನಾವು ಮುಂದಿನ ಪೀಳಿಗೆಗೆ ನೀರು ಉಳಿಸುವಂತದ್ದು ನಮ್ಮ ಕರ್ತವ್ಯವಾಗಬೇಕೆಂದರು. ಶ್ರೀ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು ಇವರು ಮಾತನಾಡುತ್ತಾ ವಿಶ್ವೇಶ್ವರಯ್ಯ ಎಂಬ ಮಹಾನ್ ಇಂಜಿನಿಯರ್ ಹುಟ್ಟಿದ ಈ ಮಾಸದಲ್ಲಿ ಅವರ ಹುಟ್ಟು ಹಬ್ಬಕ್ಕೆ ಪೂರಕವಾಗಿ ಇಂಜಿನಿಯರ್‍ಸ್ ಎಲ್ಲಾ ಸೇರಿ ನೀರನ್ನು ಉಳಿಸುವಂತಹ ಸ್ಥಾವರವನ್ನು ರಚಿಸುವಂತಹ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು.
ಮೊದಲಿನ ಅವಧಿಯಲ್ಲಿ ಖ್ಯಾತ ಪರಿಸರವಾದಿ ಶ್ರೀಪಡ್ರೆಯವರು ನೀರು, ಅಂತರ್ಜಲದ ಬಳಕೆ ಮತ್ತು ಉಳಿವಿನ ಬಗ್ಗೆ ವಿವರಿಸಿದರು. ಎರಡನೇ ಅವಧಿಯಲ್ಲಿ ಶ್ರೀ ನಾರಾಯಣ ಶೆಣೈ, ಮುಖಸ್ಥರು ಸಿವಿಲ್ ಇಂಜಿನಿಯರ್ ವಿಭಾಗ ಎಂ.ಇ.ಟಿ ಮಣಿಪಾಲ ಇವರು ಜಲ ಸಾಕ್ಷರತೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಶ್ರೀ ರವೀಂದ್ರ. ಪಿ, ಅಧ್ಯಕ್ಷರು ಪುತ್ತೂರು ಎಸೋಸಿಯೇಶನ್ ಸಿವಿಲ್ ಇಂಜಿನಿಯರ್‍ಸ್ ಪುತ್ತೂರು ಇವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತಾನಾಡಿದರು. ವೇದಿಕೆಯಲ್ಲಿ ಆಂಗ್ಲ ಮಾಧ್ಯಮದ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ, ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ಬೆಳ್ಳಾರೆ, ರಾಷ್ಟೀಯ ಸ್ವಯಂ ಸೇವಕ ಸಂಘದ ಸೇವಾ ಪ್ರಮುಖ್ ಶ್ರೀ ಗೋಪಾಲ ಚೆಟ್ಟಿಯಾರ್, ಪುತ್ತೂರು ಏಸೋಸಿಯೇಶನ್ ಸಿವಿಲ್ ಇಂಜಿನಿಯರ್‍ಸ್ ಪುತ್ತೂರು ಕಾರ್ಯದರ್ಶಿ ಶ್ರೀ ರಮೇಶ್ ಭಟ್ ಉಪಸ್ಥಿತಿರಿದ್ದರು. ಶ್ರೀ ಹರೀಶ್ ಪುತ್ತೂರಾಯ ಮತ್ತು ಶ್ರೀ ವಸಂತ ಭಟ್ ಕಾರ್ಯಕ್ರಮ ನಿರೂಪಿಸಿದರು.