ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಪುಟಾಣಿಗಳಿಗೆ ಬೃಹತ್ ಚಿಣ್ಣರ ಮೇಳ ಮಾರ್ಚ್ 14 ರಂದು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಗ್ರಾಮೀಣ ಸೊಗಡಿನ ಆಟಗಳಾದ ಜಾರುಬಂಡಿ, ಸೇತುವೆ ದಾಟುವುದು, ದೋಣಿ ಆಟ, ಚಕ್ರದಾಟ, ಜೋಕಾಲಿ, ಗಾಳಿಪಟ ಹಾರಿಸುವುದು, ಚಿತ್ರ ಬಿಡಿಸುವುದು, ಕಥೆ ಹೇಳುವುದು, ಅಭಿನಯ ಗೀತೆ, ಮುಖವಾಡ, ಚಿತ್ರಕ್ಕೆ ಬಣ್ಣ ಹಾಕುವುದು ಮುಂತಾದ 15 ಕ್ಕೂ ಮಿಕ್ಕಿ ಆಟಗಳಲ್ಲಿ ಸುಮಾರು 1700 ಮಕ್ಕಳು 4 ಗಂಟೆಗಳ ಕಾಲ ಬಿಸಿಲ ಧಗೆಯನ್ನು ಲೆಕ್ಕಿಸದೆ ತಮ್ಮನ್ನು ತಾವು ತೊಡಗಿಸಿಕೊಂಡರು.
ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಎಂ.ಕೃಷ್ಣ ಭಟ್, ಪುಟಾಣಿ ಮಕ್ಕಳ ಕೈಯಲ್ಲಿ ಬೆಲೂನ್ ಹಾರಿ ಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶಾಲಾ ಸಂಚಾಲಕರಾದ ರವೀಂದ್ರ. ಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುತ್ತೂರು ಪರಿಸರದ ಮುದ್ದು ಕಂದಮ್ಮಗಳಿಗೆ ಒಂದೇ ಸೂರಿನಡಿ ಅವರ ಅಭಿರುಚಿಗೆ ತಕ್ಕಂತಹ ಚಟುವಟಿಕೆ ಹಮ್ಮಿಕೊಳ್ಳುವುದು ನಮ್ಮ ಉದ್ದೇಶ ಎಂದರು.
ಯು.ಕೆ. ಪೈ(ಉಲ್ಲಾಸಣ್ಣ) ಅವರು ಸಂಪನ್ಮೂಲ ವ್ಯಕ್ತಿಯಾಗಿ ಗೀತೆ, ಕಥೆ ಹೇಳುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಚಿಣ್ಣರ ಮೇಳದಲ್ಲಿ ಸಂಸ್ಥೆಯ ಆಂಗ್ಲಮಾಧ್ಯಮ ಮುಖ್ಯಗುರು ಸತೀಶ್ ಕುಮಾರ್ ರೈ, ಕನ್ನಡ ಮಾಧ್ಯಮ ಮುಖ್ಯಗುರು ಆಶಾ ಬೆಳ್ಳಾರೆ, ಆಡಳಿತ ಮಂಡಳಿ ಕೋಶಾಧಿಕಾರಿ ಅಚ್ಚುತ ನಾಯಕ್, ಸುಲೇಖ ವರದರಾಜ್ ಉಪಸ್ಥಿತರಿದ್ದರು.
ಚಿಣ್ಣರ ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಉಪಹಾರ, ಜ್ಯೂಸ್, ಹಣ್ಣು ಹಂಪಲು, ಐಸ್ಕ್ರೀಮ್ ಮತ್ತು ಪ್ರಮಾಣ ಪತ್ರದ ವ್ಯವಸ್ಥೆಯನ್ನು ಆಡಳಿತ ಮಂಡಳಿಯ ವತಿಯಿಂದ ಮಾಡಲಾಗಿದ್ದು ವಿಶೇಷವಾಗಿತ್ತು.
ಆಟಗಳಲ್ಲಿ ಪಾಲ್ಗೊಂಡ ಎಲ್ಲಾ ಕಂದಮ್ಮಗಳಿಗೆ ಬಣ್ಣದ ಪೆನ್ಸಿಲ್, ಗಿರಿಗಿಟಿ, ಗಾಳಿಪಟಗಳು, ಬಲೂನ್ಗಳನ್ನು ಹಂಚಲಾಗಿತ್ತು.