ನಾಳಿನ ಕನಸನ್ನು ನನಸಾಗಿಸಲು ನಾವು ಇಂದೇ ಪ್ರಯತ್ನಿಸಬೇಕು. ಆಡಿದ್ದನ್ನು ಕಾರ್ಯರೂಪದಲ್ಲಿ ಜಾರಿಗೊಳಿಸಿ, ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಆದರ್ಶರಾಗಿ ಬಾಳಬೇಕು. ಅನುಭವವೇ ಶ್ರೇಷ್ಠವಾದ ಗುರು ಎಂದು ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ನಾರಾಯಣ ಭಟ್ ತಿಳಿಸಿದರು. ಮಕ್ಕಳಿಗೆ ಕಲಿಕಾ ವಾತಾವರಣವನ್ನು ಪೋಷಕರು ಮನೆಯಲ್ಲಿಯೇ ನಿರ್ಮಿಸಬೇಕು. ಮಗುವಿನ ಉನ್ನತಿಯಲ್ಲಿ ಪೋಷಕರ ಪಾತ್ರವೂ ಮಹತ್ವದ್ದಾಗಿದೆ. ಮಗುವಿನ ಆತ್ಮವಿಶ್ವಾಸಕ್ಕೆ ಹಾನಿಯಾಗುವ ಯಾವುದೇ ಕಾರ್ಯವನ್ನು ಪೋಷಕರು ಮಾಡಬಾರದು. ಮಾತ್ರವಲ್ಲ ಅತಿಯಾದ ಆತ್ಮವಿಶ್ವಾಸವೂ ಅಪಾಯಕಾರಿ. ಶಿಕ್ಷಣದ ಜೊತೆಗೆ ಸಂಸ್ಕಾರವೂ ಮಕ್ಕಳ ಅಭಿವೃದ್ಧಿಗೆ ಪೂರಕ ಎಂದು ಅವರು ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10 ನೇ ತರಗತಿಯ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಸುಲೇಖಾ ವರದರಾಜ್ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀ ರವಿ ಮುಂಗ್ಲಿಮನೆ ಮಕ್ಕಳ ಉನ್ನತಿಗಾಗಿ ಪೋಷಕರು ಪಾಲಿಸಬೇಕಾದ ಅಂಶಗಳನ್ನು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಶ್ರೀಮತಿ ಸಂಧ್ಯಾ ಸ್ವಾಗತಿಸಿ, ಶ್ರೀಮತಿ ಶಾರದಾ ಶೆಟ್ಟಿ ವಂದಿಸಿದರು. ಶ್ರೀಮತಿ ವೀಣಾ ಜೋಷಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.