ಶಿಕ್ಷಣದ ಜತೆಗೆ ಮಾನವೀಯ ಗುಣಗಳನ್ನು ವೃದ್ಧಿಸಿಕೊಳ್ಳುವ ಅವಶ್ಯಕತೆ ಇಂದಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಉದ್ದೀಪನಗೊಳ್ಳಲು ಸಾಧ್ಯವಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಿವೇಕಾನಂದ ವಿದ್ಯಾಸಂಸ್ಥೆ ಸಂಸ್ಕಾರದ ಶಿಕ್ಷಣ ನೀಡಿ ದೇಶಪ್ರೇಮ, ಮಾನವೀಯ ಗುಣ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.
ಪಾಶ್ಚಾತ್ಯ ಸಂಸ್ಕೃತಿಗೆ ಬಲಿಯಾಗದಿರಿ
ಇಂಗ್ಲಿಷ್ ಒಂದು ಮಾಧ್ಯಮ. ಇಂಗ್ಲಿಷ್ ಕಲಿಕೆ ತಪ್ಪಲ್ಲ. ಆದರೆ ಇಂಗ್ಲಿಷ್ ಸಂಸ್ಕೃತಿ ನಮ್ಮದಾಗಬಾರದು. ಈ ಎಚ್ಚರಿಕೆ ನಮ್ಮಲ್ಲಿರಬೇಕು. ನಾವು ಪಾಶ್ಚಾತ್ಯ ಸಂಸ್ಕೃತಿಗೆ ಬಲಿ ಆಗದೆ, ಜಗತ್ತೇ ಕೊಂಡಾಡುವ ಭಾರತೀಯ ಸಂಸ್ಕೃತಿಯಲ್ಲಿಯೇ ಬದುಕು ರೂಪಿಸಿಕೊಳ್ಳಬೇಕು. ಎಂದು ಹೇಳಿದರು.
ಶ್ಲಾಘನೀಯ
ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಆಶಿರ್ವಚನ ನೀಡಿ, ಮಕ್ಕಳಿಗೆ ಮೌಲ್ಯಯುತ, ಸಂಸ್ಕಾರಭರಿತ ಶಿಕ್ಷಣ ನೀಡಿ, ಭಾರತೀಯ ಪರಂಪರೆಯ ಸಂಸ್ಕೃತಿಯನ್ನು ತಿಳಿಸುವ ಕಾರ್ಯ ವಿವೇಕಾನಂದ ವಿದ್ಯಾಸಂಸ್ಥೆಯಿಂದ ಆಗುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿ ಮಾಸ್ಟರ್ ಪ್ಲಾನರಿಯ ಅರ್ಜುನ್ ಎಸ್. ಕೆ ಶುಭ ಹಾರೈಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ್ವರ ಅಮೈ, ಕಾರ್ಯದರ್ಶಿ ಕೃಷ್ಣ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಶೆಣೈ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮುರಳೀಕೃಷ್ಣ ರೈ, ಕೆಜಿ ವಿಭಾಗದ ಮುಖ್ಯಸ್ಥೆ ಮಮತಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ರಾಮ ನಾಯ್ಕ್, ಶಾಲಾ ನಾಯಕ ಸಾರ್ಥಕ್ ಬಿ.ಎಸ್., ನಾಯಕಿ ಕನ್ಯಾ ಶೆಟ್ಟಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿ ಸಂಚಾಲಕ ಮುರಳೀಧರ. ಕೆ ಸ್ವಾಗತಿಸಿದರು. ಸದಸ್ಯೆ ಸುನೀತಾ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಗಣೇಶ್ ಏತಡ್ಕ, ಸೌಮ್ಯ ಕುಮಾರಿ ನಿರೂಪಿಸಿದರು.
ಈ ಸಂದರ್ಭ ಶೈಕ್ಷಣಿಕ ಮತ್ತು ಕ್ರೀಡಾ ಸಾಧಕರನ್ನು ಸಮ್ಮಾನಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿದ ನವನೀತ ಕವನ ಸಂಕಲನವನ್ನು ಸಾಧ್ವಿ ಶ್ರೀ ಮಾತಾನಂದಮಯಿ ಅನಾವರಣಗೊಳಿಸಿದರು. ಕಾರ್ಯಕ್ರಮದ ಮೊದಲು ಹಾಗೂ ಅನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನಗೊಂಡಿತ್ತು.