ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿವೇಕಾನಂದ ಸ್ಕೌಟ್ಸ್ ಮತ್ತು ನಿವೇದಿತಾ ಗೈಡ್ಸ್ ವತಿಯಿಂದ ಪರಿಸರ ಜಾಗೃತಿ ಅಭಿಯಾನದ ಅಂಗವಾಗಿ ಸಸಿ ವಿತರಣಾ ಕಾರ್ಯಕ್ರಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ 1-7-2017 ಶನಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ವಲಯ ಅರಣ್ಯಾಧಿಕಾರಿ ಶ್ರೀ ಕಾರ್ಯಪ್ಪ ಮಾತನಾಡಿ, ಪರಿಸರಕ್ಕೆ ಆಮ್ಲಜನಕ ಬಿಡುಗಡೆಗೊಳಿಸಿ ನಮಗೆ ಶುದ್ಧಗಾಳಿ ಸಿಗುವಂತೆ ಮಾಡುವ ಗಿಡಮರಗಳ ರಕ್ಷಣೆಯ ಅವಶ್ಯಕತೆಯನ್ನು ತಿಳಿಸಿದರು. ಇನ್ನೋರ್ವ ಅತಿಥಿ ಶ್ರೀಮತಿ ವಿದ್ಯಾಗೌರಿ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಮಾಡಿ, ಗಿಡಗಳನ್ನು ನೆಟ್ಟು, ಪೋಷಿಸಿ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದರು.
ಡಾ| ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಿ, ಆರೋಗ್ಯ ರಕ್ಷಣೆಯ ಜೊತೆಗೆ ಪರಿಸರ ರಕ್ಷಣೆಯ ಅಗತ್ಯತೆಯನ್ನು ತಿಳಿಸಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯೆ ಸುನೀತಾ ಶೆಟ್ಟಿ, ಪೋಷಕರಾದ ಶ್ರೀ ಗಣೇಶ್ ಕೆದಿಲಾಯ, ಡಾ| ಪ್ರದೀಪ್, ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪರಿಸರಗೀತೆ ಹಾಡಿದರು. ಗೈಡ್ ಕ್ಯಾಪ್ಟನ್ ಅನುರಾಧ ಸ್ವಾಗತಿಸಿ, ಸ್ಕೌಟ್ ಮಾಸ್ಟರ್ ರೇಷ್ಮಾ ಟಿ. ವಂದಿಸಿದರು. ಕಬ್ ಮಾಸ್ಟರ್ ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಸ್ಕೌಟ್ಸ್-ಗೈಡ್ಸ್ ಶಿಕ್ಷಕರಾದ ಮಹೇಶ್ ಕುಮಾರ್, ಪುಷ್ಪಲತಾ.ಕೆ, ಉಷಾ ಕೃಷ್ಣರಾಜ್, ಆಶಾಲತಾ, ಸುದಿನಾ ಶೆಟ್ಟಿ, ದೇವಿಶ್ರೀ ವಿವಿಧ ರೀತಿಯಲ್ಲಿ ಸಹಕರಿಸಿದರು.