ದಿನಾಂಕ 5-12-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇದರ 2017-18 ರ ಸಾಲಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವೆಂಕಟೇಶ್ವರ ಅಮೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಒಳ್ಳೆಯ ಆರೋಗ್ಯ, ಸಂಸ್ಕೃತಿ, ಸಂಸ್ಕಾರವನ್ನು ಪಡೆಯಲು ಆರೋಗ್ಯವೇ ಮುಖ್ಯ. ಕ್ರೀಡೆ ಗುಣ, ಆತ್ಮ ವಿಶ್ವಾಸ, ಬದುಕಿಗೆ ಸ್ಪೂರ್ತಿ ನೀಡಬಲ್ಲದ್ದು ಮತ್ತು ಸಾಧನೆಯ ಉತ್ತುಂಗಕ್ಕೆ ಕ್ರೀಡೆಯ ಒಂದು ಪ್ರಮುಖ ಹಂತ ಎಂದರು. ರಾಜ್ಯ ತೀರ್ಪುಗಾರ ಮತ್ತು ಹಿರಿಯ ಕಬಡ್ಡಿ ಆಟಗಾರ ಶ್ರೀ ದಾಮೋದರ ಪೈ ಮಾಣಿ ಕಾರ್ಯಕ್ರಮ ಉದ್ಘಾಟಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಕ್ರೀಡೆ ಸಹಕಾರಿ. ದೇಶಕ್ಕೆ ಹೆಮ್ಮೆ ತರುವಂತಹ ಒಲಂಪಿಕ್ಸ್ ಆಟದಷ್ಟೇ ಶಾಲಾ ಕ್ರೀಡೆಗಳು ಕೂಡ ಪ್ರಮುಖವಾದುದು ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಕಬಡ್ಡಿ ಆಟಗಾರ ಶ್ರೀ ಭರತ್.ಡಿ.ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಣನೀಯವಾದ ಸೇವೆ ಸಲ್ಲಿಸಿ ರಾಜ್ಯ ತೀರ್ಪುಗಾರ ಹಾಗೂ ಹಿರಿಯ ಕಬಡ್ಡಿ ಆಟಗಾರ ಶ್ರೀ ದಾಮೋದರ ಪೈ ಮಾಣಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಮುರಳೀಧರ್.ಕೆ, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಪೂರ್ವ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಿನೇಶ್‌ಚಂದ್ರ, ನರೇಂದ್ರ ಪಿ.ಯು.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ರೂಪಲೇಖ ಹಾಗೂ ಪ್ರಾಂಶುಪಾಲರಾದ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್‌ಕುಮಾರ್‌ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಗಿರೀಶ್ ವಂದಿಸಿ, ಶಿಕ್ಷಕಿರಾದ ರೇಶ್ಮಾ ಮತ್ತು ಶಾಂತಿಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಮತ್ತು ಯೋಗ ವ್ಯಾಯಾಮ ನಡೆಯಿತು.