QR Code Business Card

ದಶದಿನಾತ್ಮಕ ಸಂಸ್ಕೃತ ಸಂಭಾಷಣಾ ಶಿಬಿರ

ಸಂಸ್ಕೃತ ಭಾಷೆ ಇತರ ಎಲ್ಲಾ ಭಾಷೆಗಳಿಗೂ ಮಾತೃಭಾಷೆ. ಅದು ಸಂಸ್ಕೃತಿಯನ್ನು ಮೈಗೂಡಿಸುವ ಭಾಷೆ ಎಂದು ಮೈತ್ರೇಯಿ ಗುರುಕುಲದ ಆಚಾರ್ಯ ಶ್ರೀ ಉಮೇಶ್ ಹೆಗಡೆ ಹೇಳಿದರು. ಅವರು ಅಕ್ಟೋಬರ್ 22 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾತೆಯರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ದಶದಿನಾತ್ಮಕ ಸಂಸ್ಕೃತ ಸಂಭಾಷಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಿಬಿರದ ದ್ವಿತೀಯ ದಿನ ಸ್ವಾಮಿ ವಿವೇಕಾನಂದ ಶಾಲೆ, ಸ್ವರ್ಗ ಇಲ್ಲಿನ ಸಂಸ್ಕೃತ ಅಧ್ಯಾಪಕ ಶ್ರೀ ಹರಿಶಂಕರ್ ಭಟ್ ಆಗಮಿಸಿ ಶುಭ ನುಡಿಯುತ್ತಾ, ಸಂಸ್ಕೃತ ಮೃತಭಾಷೆಯಲ್ಲ. ಅದು ಅಮೃತ ಭಾಷೆ. ಸಂಸ್ಕೃತ ಮಾತನಾಡುವುದರಿಂದ ಭಾಷಾ ಶುದ್ಧಿ, ನಿರರ್ಗಳತೆ ಹಾಗೂ ಶಬ್ಧ ಭಂಡಾರದ ವೃದ್ಧಿಯಾಗುತ್ತದೆ ಎಂದು ಹೇಳಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ಅಧ್ಯಕ್ಷತೆ ವಹಿಸಿ ಶುಭನುಡಿದರು. ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಮುರಳೀಧರ್ ಪ್ರಸ್ತಾವನೆಗೈದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಡಾ| ಸುರೇಶ್ ಪುತ್ತೂರಾಯ, ಶ್ರೀ ಚಂದ್ರಶೇಖರ್, ಶ್ರೀಮತಿ ಸುನೀತಾ, ಸಂಸ್ಕೃತ ಭಾರತಿ, ಅಕ್ಷರಮ್ ಬೆಂಗಳೂರು ಇಲ್ಲಿನ ಸೇವಾವ್ರತಿನಿಯರಾದ ಕುಮಾರಿ ಸೌಧಾಮನಿ ಮತ್ತು ಕುಮಾರಿ ನಾಗರತ್ನ, ಶಾಲಾ ಮುಖ್ಯಸ್ಥರಾದ ಶ್ರೀ ಸತೀಶ್ ಕುಮಾರ್ ರೈ, ಶ್ರೀಮತಿ ಸಂಧ್ಯಾ, ಶ್ರೀಮತಿ ಮಮತಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಶಶಾಂಕ್ ಸ್ವಾಗತಿಸಿ, ಅಚಿಂತ್ಯಕೃಷ್ಣ ವಂದಿಸಿದರು. ಸಿಂಚನಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಸಂಸ್ಕೃತ ಗೀತೆಗಳನ್ನು ಹಾಡಿದರು. ಶಾಲಾ ಸಂಸ್ಕೃತ ಶಿಕ್ಷಕರು ಸಹಕರಿಸಿದರು. ಈ ಶಿಬಿರ ಅಕ್ಟೋಬರ್ 22 ರಿಂದ ನವೆಂಬರ್ 2 ರ ವರೆಗೆ ನಡೆಯಲಿದೆ ಎಂದು ಶಾಲಾ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.