ದಿನಾಂಕ 9-7-2019 ನೇ ಮಂಗಳವಾರದಂದು ವಿದ್ಯಾಭಾರತಿ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಸ್ಕೆಟ್ ಬಾಲ್ ಅಂಕಣದಲ್ಲಿ ನಡೆಸಲಾಯಿತು. ಪಂದ್ಯಾಟವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಭರತ್ ಪೈ ಉದ್ಘಾಟಿಸಿ ಮಾತನಾಡಿ ಮಕ್ಕಳು ದೈಹಿಕವಾಗಿ ಸದೃಢರಾಗಬೇಕಾದರೆ ಶಾರೀರಿಕವಾಗಿ ಸಾಮರ್ಥ್ಯ ಅಗತ್ಯ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಶಾರೀರಿಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಂಡಾಗ ಮಾತ್ರ ಸಾಧ್ಯ. ಆದುದರಿಂದ ಮಕ್ಕಳು ಸ್ಪರ್ಧಾತ್ಮಕ ಪಂದ್ಯಾಟಗಳ ಮೂಲಕ ತಮ್ಮನ್ನು ತೊಡಗಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರಾದ ಶ್ರೀ ಬಿರ್ಮಣ್ಣ ಗೌಡರವರು ಮಾತನಾಡಿ ಪುತ್ತೂರು ತಾಲೂಕಿನಲ್ಲಿ ನೂತನವಾಗಿ ಬಾಸ್ಕೆಟ್ ಬಾಲ್ ಅಂಕಣವನ್ನು ನಿರ್ಮಿಸಿದ್ದು ಮಕ್ಕಳಿಗೆ ನೂತನವಾಗಿ ಕ್ರೀಡೆಯನ್ನು ಪರಿಚಯಿಸಲಾಗಿದ್ದು ಅದರಲ್ಲಿ ಬಾಸ್ಕೆಟ್ ಬಾಲ್ ಒಂದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಮುಳಿಯ ಜ್ಯುವೆಲ್ಲರ್ಸ್ನ ಮಾಲಿಕರಾದ ಮುಳಿಯ ಕೇಶವ ಪ್ರಸಾದ್ರವರು ಕ್ರೀಡೆಗಳು ವಿದ್ಯಾರ್ಥಿಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಪೂರಕವಾಗಿರಬೇಕು. ಆ ಮೂಲಕ ವಿದ್ಯಾರ್ಥಿಯು ತನ್ನ ಮನಸ್ಸನ್ನು ಕೇಂದ್ರಿಕರಿಸಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ವಿದ್ಯಾಭಾರತೀಯ ದಕ್ಷಿಣ ಕನ್ನಡ ಜಿಲ್ಲಾ ಶಾರೀರಿಕ ಪ್ರಮುಖರಾದ ಶ್ರೀ ಕರುಣಾಕರ, ದೈಹಿಕ ಶಿಕ್ಷರಾದ ಶ್ರೀ ಭಾಸ್ಕರ ಗೌಡ, ಚೆಸ್ ತರಬೇತುದಾರರಾದ ಶ್ರೀ ಜಗನ್ನಾಥ್, ವಿದ್ಯಾರ್ಥಿನಿಯರು ಪ್ರಾರ್ಥಿಸಿ, ದೈಹಿಕ ಶಿಕ್ಷಕರಾದ ಶ್ರೀ ಗಿರೀಶ್ ಕಣಿಯೂರು ಸ್ವಾಗತಿಸಿ, ದೈಹಿಕ ಶಿಕ್ಷಕಿ ಶ್ರೀಮತಿ ವಾಣಿಶ್ರೀ ವಂದಿಸಿ , ದೈಹಿಕ ಶಿಕ್ಷಕಿ ಕು. ರಶ್ಮಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ನಡೆದ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಶಾರದಾ ವಿದ್ಯಾಲಯ ಮಂಗಳೂರು ಪ್ರಥಮ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನವನ್ನು, ಹುಡುಗಿಯರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಶಾರದಾ ವಿದ್ಯಾ ನಿಕೇತನ ತಲಪಾಡಿ ಮಂಗಳೂರು, ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಮುರಳೀಧರ.ಕೆ ಯವರು ಬಹುಮಾನ ವಿತರಿಸಿ ವಿಜೇತರಿಗೆ ಶುಭ ಹಾರೈಸಿದರು.