ನಾವು ಮನಃಪೂರ್ವಕವಾಗಿ ಮಾಡಿದ ಪ್ರಾರ್ಥನೆಯಿಂದ ದೇಶ ಕಾಯುವ ಸೈನಿಕರಿಗೆ ಒಳಿತಾಗಬೇಕು. ಆಗ ಮಾತ್ರ ನಮ್ಮ ಪ್ರಾರ್ಥನೆ ಅರ್ಥಪೂರ್ಣವೆನಿಸುತ್ತದೆ. ಇಂದು ನಾವು ನೀವು ಉಸಿರಾಡುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ ಎಂದು ಖ್ಯಾತ ವಾಗ್ಮಿಶ್ರೀ ಆದರ್ಶ ಗೋಖಲೆ ಹೇಳಿದರು. ಅವರು ದಿನಾಂಕ 26-7-2019 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ 20 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಈ ದಿನ ಕಾರ್ಗಿಲ್ ಯುದ್ಧದಲ್ಲಿ ಮಡಿದ 520 ಮಂದಿ ಸೈನಿಕರ ಪತ್ನಿಯರು ಕಳೆದುಕೊಂಡ ತಮ್ಮ ಪತಿಯ ಭಾವಚಿತ್ರಕ್ಕೆ ಹೂಹಾರ ಹಾಕಿ ಕಣ್ಣೀರು ಹಾಕುತ್ತಿದ್ದಾರೆ. ಎಷ್ಟೋ ಮಂದಿ ಅಕ್ಕ-ತಂಗಿಯರು ರಕ್ಷಾಬಂಧನ ದಿವಸ ಅಣ್ಣನ ಭಾವಚಿತ್ರಕ್ಕೆ ರಕ್ಷೆಯನ್ನು ಕಟ್ಟಿ ದುಃಖಿಸುತ್ತಿದ್ದಾರೆ. ಅಂತಹ ವೀರ ಸೈನಿಕರನ್ನು ಸ್ಮರಿಸದಿದ್ದರೆ ನಮ್ಮ ಜೀವನ ವ್ಯರ್ಥ. ಗಡಿ ಕಾಯುವ ಯೋಧರು ನಮ್ಮ ಬಾಳಿನ ಆದರ್ಶವಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಹಿರಿಯ ಸದಸ್ಯರಾದ ಭಿರ್ಮಣ್ಣಗೌಡ ಮತ್ತು ಸದಸ್ಯರಾದ ಭರತ್ ಪೈ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್‌ಕುಮಾರ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶಿಕ್ಷಕ ಗಣೇಶ್ ಏತಡ್ಕ ವಂದಿಸಿದರು.