ದಿನಾಂಕ 3-8-2019 ನೇ ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕದ ಸಭಾಂಗಣದಲ್ಲಿ ಗ್ರಾಮ ವಿಕಾಸ ಸಮಿತಿ, ಬೆಟ್ಟಂಪಾಡಿ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಕೇಸರಿ ಮಿತ್ರವೃಂದ ಮಿತ್ತಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ವೃಕ್ಷಾರೋಪಣ ೨೦೧೯ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಬೆಟ್ಟಂಪಾಡಿ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾದ ಶ್ರೀ ಸೋಮಪ್ಪ ಗೌಡ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕದ ಮುಖ್ಯಗುರುಗಳಾದ ಶ್ರೀ ಮುತ್ತಪ್ಪ ಪೂಜಾರಿಯವರಿಗೆ ಸಾಂಕೇತಿಕವಾಗಿ ಹಲಸಿನ ಗಿಡವನ್ನು ಹಸ್ತಾಂತರ ಮಾಡುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುದ್ಧಿ ಮಾಹಿತಿ ಟ್ರಸ್ಟ್‌ನ ಶ್ರೀ ಉಮೇಶ್ ಮಿತ್ತಡ್ಕ ಇವರು ಮಾತನಾಡಿ, ಜಲ ಸಂರಕ್ಷಣೆ ಮತ್ತು ಮಳೆ ಕೊಯ್ಲಿನ ಬಗ್ಗೆ ಮಾಹಿತಿ ನೀಡಿದರು. ಇಂದು ನಾವು ಉಸಿರಾಡಲು ಶುದ್ಧ ಗಾಳಿ ಇದೆ ಎಂದರೆ ಅದು ನಮ್ಮ ಪೂರ್ವಜರು ನೆಟ್ಟ ಮರಗಳಿಂದ, ನಮ್ಮ ಮುಂದಿನ ಪೀಳಿಗೆಯು ಶುದ್ಧಗಾಳಿ, ನೀರು ಕುಡಿಯಬೇಕಾದರೆ ನಾವು ಮರಗಳನ್ನು ನೆಟ್ಟರೆ ಮಾತ್ರ ಸಾಧ್ಯ. ದಿನದಿಂದ ದಿನಕ್ಕೆ ಕಾಡುಗಳು ಸರ್ವನಾಶವಾಗುತ್ತಿದೆ. ಮರಗಳನ್ನು ನೆಟ್ಟರೆ ಮರದ ಬುಡದಲ್ಲಿರುವ ಎಲೆಗಳಿಂದ ನೀರು ಭೂಮಿಗೆ ಸೇರಲು ಸಾಧ್ಯ ಇಲ್ಲದಿದ್ದರೆ, ನೀರು ವ್ಯರ್ಥವಾಗಿ ಸಮುದ್ರ ಪಾಲಾಗುತ್ತದೆ ಹಾಗೂ ಮಳೆಕೊಯ್ಲಿನ ಮೂಲಕ ಛಾವಣಿ ನೀರನ್ನು ಶುದ್ದಿಗೊಳಿಸಿ ಮತ್ತೆ ಬಾವಿ, ಕೊಳವೆ ಬಾವಿ, ಕೆರೆಗಳಿಗೆ ಬಿಟ್ಟರೆ ಅಂತರ್ಜಲದ ಮಟ್ಟವನ್ನು ಹೆಚ್ಚಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನದ ಮುಕ್ತೇಸರರಾದ ಶ್ರೀ ವಿನೋದ್ ರೈ ಗುತ್ತು ರವರು ಹಿಂದಿನ ಕಾಲದಲ್ಲಿ ಸುರಿಯುತ್ತಿರುವ ಮಳೆ ಇಂದು ಕಣ್ಮರೆಯಾಗುತ್ತಿದೆ. ನಾಟಿಕಾರ್ಯಗಳು ತೆರೆಮರೆಗೆ ಸರಿದಿದೆ, ಜನರು ಮರಗಿಡಗಳನ್ನು ನೆಟ್ಟು ಬೆಳೆಸದಿದ್ದರೆ ಮುಂದೊಂದು ದಿನ ಭೂಮಿ ಬರಡಾಗಬಹುದೆಂದು ಹೇಳಿದರು.
ವೇದಿಕೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಶೇಖರ್, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯೆಯಾದ ಶ್ರೀಮತಿ ಪಾರ್ವತಿ ಲಿಂಗಪ್ಪ ಗೌಡ, ಮಿತ್ತಡ್ಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಬಾಳಪ್ಪ ಪೂಜಾರಿ ಉಪಸ್ಥಿತರಿದ್ದರು. ಗ್ರಾಮ ವಿಕಾಸ ಸಮಿತಿ ಬೆಟ್ಟಂಪಾಡಿಯ ಸಂಯೋಜಕರಾದ ಶ್ರೀ ಪ್ರಭಾಕರ್ ರೈ ಬಾಜುವಳ್ಳಿ ಸ್ವಾಗತಿಸಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಸಿ, ವಿದ್ಯಾರ್ಥಿಗಳಾದ ಸಾಗರ್ ಮತ್ತು ಕಿರಣ ಪ್ರಾರ್ಥಿಸಿ, ಶಿಕ್ಷಕ ಶ್ರೀ ಗಣೇಶ್ ಏತಡ್ಕ ನಿರೂಪಿಸಿ, ಗ್ರಾಮ ವಿಕಾಸ ಸಮಿತಿ ಶಾಲಾ ಸಂಯೋಜಕರು ಶ್ರೀ ಮಹೇಶ್ ಹಿರೆಮಣಿ, ಶಿಕ್ಷಕರಾದ ಶ್ರೀ ಗಿರೀಶ್ ಕಣಿಯಾರು ಮತ್ತುಶ್ರೀ ಶಿವಪ್ರಸಾದ್ ರವರು ಸಹಕರಿಸಿದರು. ನಂತರ ಸುಮಾರು ೫೦ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಗಿಡಗಳನ್ನು ನೆಡಲಾಯಿತು.