QR Code Business Card

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ  ವರ್ಷಾ ಕೆ. ಇವರಿಗೆ ಯುವ ವಿಜ್ಞಾನಿ ಪುರಸ್ಕಾರ

ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಆರ್. ಸತೀಶ್ಚಂದ್ರ ಇವರಿಂದ ಯುವ ವಿಜ್ಞಾನಿಗಳಿಗೆ ಸನ್ಮಾನ

ಡಿಸೆಂಬರ್ 27 ರಿಂದ 31 ರ ತನಕ ಕೇರಳದ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾದ ಕು. ವರ್ಷಾ ಕೆ. ಇವರು ಯುವ ವಿಜ್ಞಾನಿ ಪುರಸ್ಕಾರವನ್ನು ಪಡೆದುಕೊಂಡಿರುತ್ತಾರೆ. ದೇಶದ ನಾನಾ ರಾಜ್ಯಗಳಿಂದ ಸುಮಾರು 700 ರಷ್ಟು ಸ್ಪರ್ಧಾಳುಗಳು ಭಾಗವಹಿಸಿದ ಈ ಸಮಾವೇಶದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೂರು ತಂಡಗಳು ತಮ್ಮ ಮಾದರಿಗಳೊಂದಿಗೆ ಭಾಗವಹಿಸಿದ್ದು ಕುಮಾರಿ ವರ್ಷಾ ಕೆ. (ಶ್ರೀ ಅರವಿಂದ ಭಟ್ ಹಾಗೂ ಶ್ರೀಮತಿ ಶುಭಪ್ರದ ಇವರ ಪುತ್ರಿ) ಹಾಗೂ ಕುಮಾರಿ ಹಿತಾ ಕಜೆ (ಶ್ರೀ ಕಿರಣ್ ಕಜೆ ಹಾಗೂ ಶ್ರೀಮತಿ ವೀಣಾ ಕಿರಣ್ ಇವರ ಪುತ್ರಿ) ಇವರು ಸಂಶೋಧಿಸಿದ ಮ್ಯಾಜಿಕಲ್ ಇಂಕ್ ಹಾಗೂ ಅರೆಕಾ ಇಂಕ್ ಎಂಬ ಸಂಶೋಧನೆಗೆ ರಾಷ್ಟ್ರಮಟ್ಟದಲ್ಲಿ ಯುವ ವಿಜ್ಞಾನಿ ಗೌರವ ಲಭಿಸಿದ್ದು ಇದು ಕರ್ನಾಟಕದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಏಕೈಕ ಸಂಶೋಧನೆಯಾಗಿರುತ್ತದೆ. ಇದಲ್ಲದೇ ಕು. ನೇಹಾ ಭಟ್, ಕು. ಆಶ್ರಯ ಹಾಗೂ ಅನ್ವಿತ್ ಎನ್, ಪ್ರತ್ವಿರಾಜ್ ಇವರಗಳ ತಂಡ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾರೆ.

ಪುರಸ್ಕಾರವನ್ನು ಪಡೆದ ಯುವ ವಿಜ್ಞಾನಿಗಳಿಗೆ ದಿನಾಂಕ 2-1-2020 ನೇ ಶುಕ್ರವಾರದಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಆರ್. ಸತೀಶ್ಚಂದ್ರ ಇವರು ಶಾಲು ಹೊದಿಸಿ ಸನ್ಮಾನಿಸಿದರು. ಪುರಸ್ಕಾರ ಪಡೆದ ವಿದ್ಯಾರ್ಥಿನಿಯರಿಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ದೀಪ್ತಿ ಆರ್. ಭಟ್, ಶ್ರೀಮತಿ ರೇಖಾ ಆರ್., ಶ್ರೀ ಶಿವಪ್ರಸಾದ್, ಸ್ಥಳೀಯ ಕೃಷಿಕರಾದ ಶ್ರೀ ಶಂಕರ ಭಟ್ ಬದನಾಜೆ ಮಾರ್ಗದರ್ಶನ ನೀಡಿರುತ್ತಾರೆ ಹಾಗೂ ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಪ್ರಸಾದ್ ಶಾನ್‌ಭಾಗ್ ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಸಿಂಧೂ ವಿ. ಜಿ. ಇವರು ಪ್ರಯೋಗಾಲಯದ ವ್ಯವಸ್ಥೆಯನ್ನು ಒದಗಿಸಿ ಮಾರ್ಗದರ್ಶನ ನೀಡಿರುತ್ತಾರೆ. ಸನ್ಮಾನ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶಿವಪ್ರಕಾಶ್ ಎಂ, ಸಂಚಾಲಕರಾದ ಶ್ರೀ ಮುರಳೀಧರ ಕೆ, ಸದಸ್ಯರಾದ ಶ್ರೀ ಚಂದ್ರಶೇಖರ, ಶ್ರೀಮತಿ ಸುಧಾ, ಶ್ರೀಮತಿ ವಸಂತಿ ಕೆ., ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ, ಶ್ರೀಮತಿ ಸಂಧ್ಯಾ, ಶ್ರೀಮತಿ ಮಮತಾ, ಕ್ಯಾಂಪ್ಕೋ ಸಂಸ್ಥೆಯ ಶ್ರೀ ಶ್ಯಾಮ್ ಪ್ರಸಾದ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.