ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ಒಂದು ವಾರಗಳ ಕಾಲ ನಡೆಯಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ರೋಬೋಟಿಕ್ ಕಾರ್ಯಗಾರ ದೀಪ ಬೆಳಗುವುದರೊಂದಿಗೆ ಆರಂಭಗೊಂಡಿತು.
ಶಾಲೆಯಲ್ಲಿ ಸ್ಥಾಪಿತಗೊಂಡ ಕೇಂದ್ರ ಸರಕಾರದ ಮಹತ್ವಾಕಾಕ್ಷೆಯ ಯೋಜನೆಯಾದ ಅಟಲ್ ಟಿಂಕರಿಂಗ್ ಲ್ಯಾಬ್ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಶ್ ಪ್ರಸನ್ನ ಅವರು ಮಾತನಾಡಿ ಇಲೆಕ್ಟ್ರಿಕಲ್ ಸೈನ್ಸ್‌ನಿಂದ ಇಲೆಕ್ಟ್ರಾನಿಕ್ಸ್ ಮುಂದೆ ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ರೋಬೋಟಿಕ್ಸ್ ಹೀಗೆ ತಂತ್ರಜ್ಞಾನ ನಡೆದು ಬಂದ ಹಾದಿ ಹಾಗೂ ಇಂದಿನ ಜೀವನದಲ್ಲಿ ಅದರ ಮಹತ್ವದೊಂದಿಗೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಯಶಸ್ಸನ್ನು ಗಳಿಸಲು ವಿಶ್ವಾಸ, ನಮ್ರತೆ, ಏಕಾಗ್ರತೆ ಹಾಗೂ ಸನ್ನಡತೆಯನ್ನು ಅಳವಡಿಸಿಕೊಳ್ಳಬೇಕೆಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ಮಹಂತೇಶ್ ಚೌಧರಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಹರೇಕೃಷ್ಣ, ಮುಖ್ಯೋಪಾಧ್ಯಾಯರುಗಳು, ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.