QR Code Business Card

ಅಗಲಿದ ದಿವ್ಯಾತ್ಮಉರಿಮಜಲು ಶ್ರೀ ರಾಮ ಭಟ್‌ರವರಿಗೆ ನುಡಿನಮನ

ಡಿಸೆಂಬರ್ 7 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ನಿನ್ನೆ ನಮ್ಮನ್ನು ಅಗಲಿದ ಹಿರಿಯ ಚೇತನ ಉರಿಮಜಲು ಶ್ರೀ ರಾಮ ಭಟ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ವೇದಿಕೆಯಲ್ಲಿ ರಾಮ ಭಟ್‌ರ ಒಡನಾಡಿಗಳು ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾದ ಶ್ರೀ ಪೂರ್ಣಚಂದ್ರರವರು ಶ್ರದ್ಧಾಂಜಲಿ ಅರ್ಪಿಸಿ, ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಅಡಿಪಾಯ ಹಾಕಿದವರು ಶ್ರೀ ರಾಮ ಭಟ್‌ರು, ಅವರು ನೆಟ್ಟು ಬೆಳಸಿದ ಮರ ಇಂದು 70 ವಿದ್ಯಾಸಂಸ್ಥೆಗಳಾಗಿ ತನ್ನ ಕವಲನ್ನು ಚಾಚಿ ಹೆಮ್ಮರವಾಗಿ ನಿಂತಿರುವುದು ಹೆಮ್ಮೆಯ ವಿಚಾರವಾಗಿದೆ. ಸಮಾಜದಲ್ಲಿ ಭಾರತೀಯ ಸಂಸ್ಕಾರ ಸಂಸ್ಕೃತಿಗೆ ತೊಂದರೆಯಾದಾಗ ತಮ್ಮದೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಭಾರತೀಯ ಸಂಸ್ಕೃತಿಯ ಶಿಕ್ಷಣವನ್ನು ಪ್ರೋತ್ಸಾಹಿಸಿದ್ದಾರೆ. ಅವರ ವೈಚಾರಿಕತೆ ನಿಷ್ಕಳಂಕ ವ್ಯಕ್ತಿತ್ವ ಸಾಮಾನ್ಯರಲ್ಲಿ ಅಸಾಮಾನ್ಯರಾಗುವ ಗುಣ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಶಿವಪ್ರಕಾಶ್, ಆಡಳಿತ ಮಂಡಳಿಯ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀ ರಾಮ ಭಟ್ ರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆಯನ್ನು ನಡೆಸಲಾಯಿತು. ಶಿಕ್ಷಕಿ ಶ್ರೀಮತಿ ರೇಷ್ಮಾ.ಟಿ ಕರುಣಾಳು ಬಾ ಬೆಳಕೆ ಹಾಗೂ ವಿದ್ಯಾರ್ಥಿನಿಯರು ದೀಪವು ನಿನ್ನದೇ ಎಂಬ ಗೀತನಮನವನ್ನು ಸಲ್ಲಿಸಿದರು.

ಶಾಲಾ ಆಡಳಿತ ಮಂಡಳಿಯ ಸಂಚಾಲಕ ಶ್ರೀ ರವಿನಾರಾಯಣ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಯಶೋಧ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಶ್ರೀ ರಾಮ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.