QR Code Business Card

ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

ಡಿಸೆಂಬರ್ 20 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶಾಲೆಯಲ್ಲಿ ನಡೆಯುವ ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಕ್ರಾಫ್ಟ್, ಸೆಮಿ ಕ್ಲಾಸಿಕಲ್ ನೃತ್ಯ, ಭರತನಾಟ್ಯ, ಸುಗಮ ಸಂಗೀತ, ಯಕ್ಷಗಾನ, ಕರಾಟೆ ಮುಂತಾದ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆಯು ನಡೆಯಿತು.

ಶಾಲಾ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಮಾಲಾ ಮಹೇಶ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಗೀತ ಹಾಗೂ ನಾಟ್ಯಗಳು ತಾಯಿಯ ಗರ್ಭದಲ್ಲಿರುವಾಗಲೇ ಮಗು ಅಭ್ಯಾಸ ಮಾಡುತ್ತದೆ. ನಂತರದ ದಿನಗಳಲ್ಲಿ ತರಗತಿಗಳ ಮೂಲಕ ಸಹಪಠ್ಯ ಚಟುವಟಿಕೆಗಳನ್ನು ಅಭ್ಯಾಸ ಮಾಡಿ ಮಗುವಿನಲ್ಲಿರುವ ಸೂಪ್ತ ಪ್ರತಿಭೆಗಳನ್ನು ಹೊರತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಭರತನಾಟ್ಯ ಕಲಾವಿದೆ ಹಾಗೂ ಗುರು ಶ್ರೀಮತಿ ಸ್ವಸ್ತಿಕ, ಶಾಸ್ತ್ರೀಯ ಸಂಗೀತ ಶಿಕ್ಷಕಿ ಶ್ರೀಮತಿ ವಿದ್ಯಾ ಈಶ್ವರಚಂದ್ರ, ಸೆಮಿ ಕ್ಲಾಸಿಕಲ್ ನೃತ್ಯಗುರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ರಾಜೇಶ್ ವಿಟ್ಲ, ಯಕ್ಷಗಾನ ನಾಟ್ಯಗುರು ಬಾಲಕೃಷ್ಣ ಉಡ್ಡಂಗಳ, ಕರಾಟೆ ತರಬೇತುದಾರರಾದ ಶ್ರೀ ಎಂ.ಸುರೇಶ್, ಹಿರಿಯ ಶಿಕ್ಷಕಿ ಶ್ರೀಮತಿ ಮಾಲಿನಿ, ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಧ್ಯಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಸೌಮ್ಯಕುಮಾರಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ರೇಷ್ಮಾ ಪ್ರಾರ್ಥಿಸಿ, ಶಿಕ್ಷಕ ಶ್ರೀ ವೆಂಕಟೇಶ್ ಪ್ರಸಾದ್ ವಂದಿಸಿದರು. ಶಿಕ್ಷಕಿ ಶ್ರೀಮತಿ ಆಶಾ.ಕೆ ಕಾರ್ಯಕ್ರಮ ನಿರೂಪಿಸಿದರು.