ದಿನಾಂಕ 26-01-2022ನೇ ಬುಧವಾರದಂದು ವಿವೇಕಾನಂದ ವಿದ್ಯಾಸಂಸ್ಥೆಗಳು, ವಿವೇಕನಗರ, ತೆಂಕಿಲ, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ 73ನೇ ಗಣರಾಜ್ಯೋತ್ಸವವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ದೇಶದ ನಿವೃತ್ತ ಸೈನಿಕ ಮೇಜರ್ ಸುಬೆದಾರ್ ಶ್ರೀ ಚಂದ್ರಶೇಖರ ಅವರ ಗಣರಾಜ್ಯೋತ್ಸವದ ಧ್ವಜಾರೋಹಣಗೈದರು. ನಂತರ ಮಾತನಾಡಿದ ಅವರು ’ಇಂದು ನಾವು 73ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ, ಭಾರತದ ಪ್ರಜೆಗಳಿಗಾಗಿ ಒಂದು ಚೌಕಟ್ಟನ್ನು ನಿರ್ಮಿಸಿ ಸಂವಿಧಾನವನ್ನು ರೂಪಿಸಿದ ದಿನವಾಗಿದೆ. ಇದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ರಾಜೇಂದ್ರಪ್ರಸಾದ್ರವರು ನೀಡಿದ ಕೊಡುಗೆ ಅತ್ಯಂತ ಶ್ಲಾಘನೀಯ’ ಎಂದು ಹೇಳಿದರು.
ವಿವೇಕಾನಂದ ಬಿ.ಎಡ್ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀಮತಿ ಗಂಗಮ್ಮರವರು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಅಪ್ರತಿಮ ಸಾಧನೆಯನ್ನು ಸ್ಮರಿಸುವ ಪರಾಕ್ರಮ ದಿವಸದ ಕುರಿತು ತಿಳಿಸಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಶಿವಪ್ರಕಾಶ್ ರವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುತ್ತೂರು ನ್ಯಾಯಾಲಯ ಮುಖ್ಯ ನ್ಯಾಯಧೀಶರಾದ ಶ್ರೀ ಅರವಿಂದ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯರಾದ ಶ್ರೀ ಭಿರ್ಮಣ್ಣ ಗೌಡ ಹಾಗೂ ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ರೂಪಲೇಖ, ಮತ್ತು ನಾಲ್ಕೂ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಬಿ.ಎಡ್ನ ವಿದ್ಯಾರ್ಥಿ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ’ವಂದೇ ಮಾತರಂ’ ಧ್ವಜಗೀತೆ ಮತ್ತು ರಾಷ್ಟ್ರಗೀತೆಯನ್ನು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಡಿದರು.
ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರು ನಿರ್ವಹಿಸಿದರು. ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶಾನುಭೋಗ್ ಸ್ವಾಗತಿಸಿ, ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ಶ್ರೀಮತಿ ಅನುಷಾ ವಂದಿಸಿದರು. ಶ್ರೀಮತಿ ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು.