QR Code Business Card

ಪ್ರತಿಭಾ ಸಿಂಚನಾ

ನಿಜವಾದ ಪ್ರತಿಭೆ ಎಲ್ಲೇ ಇದ್ದರೂ ಎಷ್ಟೇ ಕಷ್ಟವಿದ್ದರೂ ಏನೇ ಅಡೆತಡೆಗಳಿದ್ದಾರೂ ತಲುಪಬೇಕಾದ ಗುರಿ ತಲುಪಿಯೇ ತಲುಪುತ್ತದೆ ಎಂಬ ವಿವೇಕವಾಣಿಯಂತೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಹಿರಿಯ ವಿದ್ಯಾರ್ಥಿನಿ ಸಾಧಕರಿಗೆ ಸನ್ಮಾನಿಸುವ ಪ್ರತಿಭಾ ಸಿಂಚನಾ ಕಾರ್ಯಕ್ರಮವು ಶಾಲಾ ಯಾದವಶ್ರೀ ಸಭಾಂಗಣದಲ್ಲಿ ದಿನಾಂಕ 11-2-2022 ನೇ ಶುಕ್ರವಾರದಂದು ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ.ಕೃಷ್ಣ ಭಟ್ ಸಾಧಕ ವಿದ್ಯಾರ್ಥಿನಿಯರಾದ ಕು.ಸಿಂಚನಾಲಕ್ಷ್ಮೀ(ದೆಹಲಿಯ ಏಮ್ಸ್ ಸಂಸ್ಥೆಯ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ), ಡಾ.ಬಿ.ಎನ್ ಅನುಶ್ರೀ(ಮೈಸೂರಿನ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಎಂ.ಡಿ. ವಿದ್ಯಾರ್ಥಿನಿ), ಕು.ಆಶ್ರಯ.ಪಿ (ರಾಷ್ಟ್ರೀಯ ಮಟ್ಟದ ಎನ್.ಟಿ.ಎಸ್.ಇ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ) ಈ ಪ್ರತಿಭಾವಂತರುಗಳನ್ನು ಸನ್ಮಾನಿಸಿ, ವಿದ್ಯಾರ್ಥಿಗಳ ಶಿಕ್ಷಣ ಲೋಕಹಿತಕ್ಕೆ ಪೂರಕವಾಗಿ ಸಮಾಜದ ಏಳ್ಗೆಗೆ ಸಹಕಾರಿಯಾಗಿರಬೇಕೆಂದು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಸಾಧಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪ್ರಜ್ವಲ ಹಾರೈಕೆಯನ್ನಿತ್ತರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾಗಿರುವ ಶ್ರೀ ರವೀಂದ್ರ.ಪಿ ಇವರು ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರ ಸಾಧನೆಯನ್ನು ಶ್ಲಾಘಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸನ್ಮಾನಗೊಂಡ ವಿದ್ಯಾರ್ಥಿನಿಯರು ಮತ್ತು ಸಾಧನೆಗೆ ಬೆನ್ನೆಲುಬಾದ ಅವರ ಹೆತ್ತವರು ತಮ್ಮ ಮಕ್ಕಳಾ ಸಾಧನೆಯ ಹಿನ್ನೆಲೆ ಅವರ ಪ್ರಯತ್ನ ಅಚಲ ಶ್ರದ್ಧೆ, ಗುರುಗಳ ಪ್ರೋತ್ಸಾಹದ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ ವಿದ್ಯಾರ್ಥಿಗಳ ಸಾಧನೆಗಳನ್ನು ಕೊಂಡಾಡಿದರು. ಸಂಸ್ಥೆಯ ಸಂಚಾಲಕರಾದ ಶ್ರೀ ರವಿನಾರಾಯಣ.ಎಂ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾನಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸತೀಶ್ ಕುಮಾರ್ ರೈ, ಶ್ರೀಮತಿ ಮಮತಾ, ಶ್ರೀಮತಿ ಸಂಧ್ಯಾ ಸಹಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಆಶಾ ಬೆಳ್ಳಾರೆ, ಶ್ರೀಮತಿ ನಳಿನಿ ವಾಗ್ಲೆ, ಶ್ರೀ ಪ್ರಶಾಂತ್ ಶ್ಯಾನ್‌ಬೋಗ್, ಮತ್ತು ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಶ್ರೀಮತಿ ಭಾರತಿ.ಎಸ್.ಎ ಮತ್ತು ಶ್ರೀಮತಿ ಸಾಯಿಗೀತ ಸಾಧಕರ ಪರಿಚಯ ಮಾಡಿದರು. ಶ್ರೀಮತಿ ಆಶಾ.ಕೆ ಹಾಗೂ ಶ್ರೀಮತಿ ಸೌಮ್ಯ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ ವಂದನಾರ್ಪಣೆಗೈದರು.