QR Code Business Card

29 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ – ಶಾಲಾ ಬಾಲ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಭಾರತ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ರಾಜ್ಯದಲ್ಲಿ 29 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು 10-17 ರ ವಯೋಮಾನದ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಯೋಜನಾ ವರದಿಗಳ ಮೌಲ್ಯಮಾಪನವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ತಜ್ಞ ಮೌಲ್ಯಮಾಪಕರ ತಂಡ ಮಾಡಿರುತ್ತದೆ.

ಜನವರಿ ತಿಂಗಳಲ್ಲಿ ನಡೆದ 29 ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ (N.C.S.C) ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸೀನಿಯರ್ ವಿಭಾಗದ ಬಾಲ ವಿಜ್ಞಾನಿಗಳ ತಂಡವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಸೀನಿಯರ್ ವಿಭಾಗದಲ್ಲಿ 9 ನೇ ತರಗತಿಯ ವಿದ್ಯಾರ್ಥಿಗಳಾದ ಅನ್ವಿತ್.ಎನ್ (ಮುಡೋಡಿ ನಿವಾಸಿ ಶ್ರೀ ಶ್ರೀಪತಿ.ಎನ್ ಮತ್ತು ಶ್ರೀಮತಿ ವಿದ್ಯಾಲಕ್ಷ್ಮೀ.ಎ ಇವರ ಪುತ್ರ) ಹಾಗೂ ಸಮರ್ಥರಾಮ ರೈ (ಮೊದೆಲ್ಕಾಡಿ ಶ್ರೀ ಸತೀಶ್ ಕುಮಾರ್ ರೈ ಮತ್ತು ಪ್ರಗತಿ.ಎಸ್.ರೈ ಇವರ ಪುತ್ರ) ಇವರ ʻA herbal spray from weed, Wedelia trilobata: to repell household vegetable pests’, ಈ ಯೋಜನೆಯು ಕರ್ನಾಟಕದಿಂದ ರಾಷ್ಟ್ರಮಟ್ಟದಿಂದ ಆಯ್ಕೆಯಾದ 30 ಬಾಲ ವಿಜ್ಞಾನಿಗಳ ತಂಡಗಳಲ್ಲಿ ಅತ್ಯುತ್ತಮವಾದ 2 ನೇ ತಂಡವಾಗಿ ಆಯ್ಕೆಗೊಂಡಿರುತ್ತದೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಾಲ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ದಿನಾಂಕ 25-2-2022 ರಂದು ಜರಗಿತು. ಪ್ರಶಸ್ತಿ ವಿಜೇತ ಬಾಲ ವಿಜ್ಞಾನಿಗಳನ್ನು ಹಾಗೂ ಮಾರ್ಗದರ್ಶಿ ಶಿಕ್ಷಕರನ್ನು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಡಾ. ಅಶ್ವತ್ ನಾರಾಯಣ ಸಿ.ಎನ್. ಹಾಗೂ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಬಿ.ಸಿ.ನಾಗೇಶ್‌ರವರು ಪ್ರಶಸ್ತಿ ಫಲಕಗಳನ್ನು ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಗಿರೀಶ್ ಕಡ್ಲೆವಾಡ, ಸಹಕಾರ್ಯದರ್ಶಿ ಶ್ರೀ ಬಿ.ಎನ್.ಶ್ರೀನಾಥ್ ಉಪಸ್ಥಿತರಿದ್ದರು. ಇಸ್ರೋದ ನಿವೃತ್ತ ನಿರ್ದೇಶಕರಾದ ಟಿ.ಕೆ.ಅನುರಾಧ ಅವರು ಬಾಲ ವಿಜ್ಞಾನಿಗಳೊಂದಿಗೆ ಸಂವಾದವನ್ನು ನಡೆಸಿದರು ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.