QR Code Business Card

ಶುಭ ವಿದಾಯ

ಜೀವನಕ್ಕೊಂದು ದಾರಿಯನ್ನು ತೋರುವವ ಗುರು. ಗುರು ತೋರಿದ ಹಾದಿಯೇ ಭವಿಷ್ಯದ ಏಳಿಗೆಗೆ ದೀವಟಿಗೆ ಇದ್ದಂತೆ. ಆ ದೀವಟಿಗೆ ತಾನು ಉರಿದು ಇನ್ನೊಂದನ್ನು ಉರಿಸುವಂತೆ, ನಿಜವಾದ ಗುರು ಸದಾ ಕ್ರಿಯಾಶೀಲರಾಗಿರುತ್ತಾರೆ. ಅಂತಹ ಕ್ರಿಯಾಶೀಲ ಭಗಿನಿಯರಾದ ಶ್ರೀಮತಿ ಮಧುರಾ ಜೋಶಿ, ಶ್ರೀಮತಿ ವೀಣಾ ಜೋಶಿ, ಮತ್ತು ಶ್ರೀಮತಿ ಶಾರದಾ ಶೆಟ್ಟಿ.ಕೆ ಯವರ ಸೇವಾ ಸ್ಮರಣಾ ಕಾರ್ಯಕ್ರಮವು ದಿನಾಂಕ 31-3-2022 ನೇ ಗುರುವಾರದಂದು ಶಾಲಾ ಆವರಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ವಿಶೇಷ ಅಭ್ಯಾಗತರಾಗಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಚಿಗಳಾದ ಶ್ರೀ ಅಚ್ಯುತ್ ನಾಯಕ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಎಂ.ಶಿವಪ್ರಕಾಶ್, ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ರವಿನಾರಾಯಣ.ಎಂ, ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಶ್ರೀ ಮುರಳೀಧರ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯಕುಮಾರ್, ಶಿಕ್ಷಕ-ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಗೀತಾ.ಡಿ.ರೈ, ಶ್ರೀ ರಾಮಕೃಷ್ಣ ಜೋಶಿ, ಶ್ರೀ ಗಣೇಶ್ ಜೋಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಖ್ಯ ಅಭ್ಯಾಗತರಾದ ಶ್ರೀ ಅಚ್ಯುತ್ ನಾಯಕ್ ಅವರು ಭಗಿನಿಯರಿಗೆ ಗೌರವಾರ್ಪಣೆ ಮಾಡಿ, ಗುರುವಿನ ಶ್ರೇಷ್ಠ ಸ್ಥಾನದ ಹೆಗ್ಗಳಿಕೆಯ ಬಗ್ಗೆ ತನ್ನ ಮಾತುಗಳ ಮೂಲಕ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ’ಶುಭ ವಿದಾಯ’ ಗೊಂಡಿರುವ ಶಿಕ್ಷಕಿಯರಿಗೆ ಗಣ್ಯರೆಲ್ಲರೂ ಸೇರಿ ಗೌರವಾರ್ಪಣೆ ಮಾಡಿ ಶುಭ ಹಾರೈಸಿದರು. ಶಿಕ್ಷಕಿಯರ ಪರವಾಗಿ ಶ್ರೀಮತಿ ಪುಪ್ಪಲತಾ.ಬಿ.ಕೆ ತನ್ನ ನೆನಪಿನ ಬುತ್ತಿಯನ್ನು ಉಣಬಡಿಸಿದರು. ಶಿಕ್ಷಕಿಯರಾದ ಶ್ರೀಮತಿ ಯಶೋಧ, ಶ್ರೀಮತಿ ಸೌಮ್ಯಕುಮಾರಿ, ಶ್ರೀಮತಿ ವೀಣಾ ಕುಮಾರಿ, ಶ್ರೀಮತಿ ಕವಿತಾ, ಶ್ರೀಮತಿ ರೇಷ್ಮಾ, ಸಮೂಹಗೀತೆಯ ಮೂಲಕ ಶುಭ ವಿದಾಯ ಕೋರಿದರು.

ಬೀಳ್ಕೊಡುಗೆ ಸ್ವೀಕರಿಸಿದ ಶಿಕ್ಷಕಿಯರಾದ ಶ್ರೀಮತಿ ಮಧುರಾ ಜೋಶಿ, ಶ್ರೀಮತಿ ವೀಣಾ ಜೋಶಿ, ಮತ್ತು ಶ್ರೀಮತಿ ಶಾರದಾ ಶೆಟ್ಟಿ.ಕೆ ಇವರು ತಮ್ಮ ಸೇವಾವಧಿಯ ವಿವಿಧ ಮಜಲುಗಳ ಅನುಭವಗಳನ್ನು ವ್ಯಕ್ತಪಡಿಸಿದರು. ಶ್ರೀಮತಿ ಸುಜಾತ ಪ್ರಾರ್ಥಿಸಿ, ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ, ವಿದಾಯ ಸನ್ಮಾನವನ್ನು ಸ್ವೀಕರಿಸಲಿರುವ ಸಹೋದ್ಯೋಗಿ ಬಂಧುಗಳ ಸೇವಾ ಸ್ಮರಣೆ ಮಾಡಿದರು.

ಶ್ರೀಮತಿ ಸಾಯಿಗೀತ.ಎಸ್.ರಾವ್, ಶ್ರೀ ರಾಧಕೃಷ್ಣ ರೈ ಹಾಗೂ ಶ್ರೀಮತಿ ಸಂಧ್ಯಾ.ಕೆ ಸಹೋದ್ಯೋಗಿ ಮಿತ್ರರನ್ನು ಪರಿಚಯಿಸಿದರು. ಸಂಸ್ಥೆಯ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಭಾಸ್ಕರ್ ಗೌಡ.ಎಂ ವಂದಿಸಿ, ಶ್ರೀಮತಿ ಆಶಾ.ಕೆ ಮತ್ತು ಶ್ರೀಮತಿ ಅನುರಾಧ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಆಡಳಿತ ಮಂಡಳಿ ಸರ್ವಸದಸ್ಯರು, ಶಿಕ್ಷಕ-ಶಿಕ್ಷಕೇತರ ಬಂಧುಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಹಕರಿಸಿದರು.