QR Code Business Card

ಪುತ್ತೂರು ತಾಲೂಕು ಮಟ್ಟದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಯುಜ್ಯತೇ ಇತಿ ಯೋಗಃ. ಯೋಗೋ ನಾಮ ಚಿತ್ತವೃತ್ತಿ ನಿರೋಧಃ. ಯೋಗದಿಂದ ದೇಹಾರೋಗ್ಯ, ದೀರ್ಘಾಯುಷ್ಯ, ಶಕ್ತಿ, ಸುಖ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್. ಎಂ ಹೇಳಿದರು.

ಅವರು ಮಾನವೀಯತೆಗಾಗಿ ಯೋಗ ಎಂಬ ಧ್ಯೇಯದೊಂದಿಗೆ ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 21-6-2022 ನೇ ಗುರುವಾರ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ನಡೆದ ೮ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಆಶಯ ಭಾಷಣ ಮಾಡಿ ಮಾತನಾಡುತ್ತಿದ್ದರು. ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪುತ್ತೂರು ನಗರಸಭಾಧ್ಯಕ್ಷರಾದ ಶ್ರೀ ಜೀವಂಧರ್ ಜೈನ್ ಇವರು ಯೋಗದ ಮೂಲಕ ದೇಹದ ರಕ್ಷಣೆ ಹಾಗೂ ದೇಶಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಭಾರತದಲ್ಲಿ ಆರಂಭವಾದ ಈ ಕಾರ್ಯ ಇಂದು ಪ್ರಪಂಚದ 175 ಕ್ಕೂ ಅಧಿಕ ದೇಶಗಳಲ್ಲಿ ನಡೆಯುತ್ತಿದೆ ಎಂದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಸಿ. ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ರವಿನಾರಾಯಣ ಎಂ. ಶುಭಾಶಂಸನೆಗೈದರು. ವೇದಿಕೆಯಲ್ಲಿ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಶ್ರೀ ಸುಂದರ ಗೌಡ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯಕುಮಾರ್. ಎಂ, ಶಿಕ್ಷಣ ಸಂಯೋಜಕ ಶ್ರೀ ಹರಿಪ್ರಸಾದ್ ಇವರು ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಪಂಚಾಯತ್ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಶ್ರೀ ವಿಷ್ಣುಪ್ರಸಾದ್ ಸ್ವಾಗತಿಸಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ವಂದಿಸಿದರು. ಸಹಶಿಕ್ಷಕರಾದ ಶ್ರೀಮತಿ ಯಶೋದಾ ಮತ್ತು ಶ್ರೀ ವೆಂಕಟೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ನಡೆದ ಸಾಮೂಹಿಕ ಯೋಗ ಪ್ರದರ್ಶನವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ನಮಿತಾ ಕೆ.ಕೆ ಮತ್ತು ಶ್ರೀ ಪವನ್ ಕುಮಾರ್ ನಡೆಸಿಕೊಟ್ಟರು. ಪ್ರತಿಜ್ಞಾ ವಿಧಿ ನೆರವೇರಿಸಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಭಾಸ್ಕರ ಗೌಡ ಇವರ ಮಾರ್ಗದರ್ಶನದಲ್ಲಿ ಶ್ರೀ ಗಿರೀಶ್, ಶ್ರೀ ದೀಪಕ್, ಶ್ರೀಮತಿ ಆಶಾಲತಾ, ಶ್ರೀಮತಿ ವಾಣಿಶ್ರೀ, ಶ್ರೀಮತಿ ರಶ್ಮಿ ಯೋಗ ಪ್ರದರ್ಶನದಲ್ಲಿ ಸಹಕರಿಸಿದರು. ಸಾಮೂಹಿಕ ಯೋಗ ಪ್ರದರ್ಶನದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೊತೆಗೆ ಸರಕಾರಿ ಪದವಿಪೂರ್ವ ಕಾಲೇಜು, ಪುತ್ತೂರು ಹಾಗೂ ನೆಲ್ಲಿಕಟ್ಟೆ ಶಿವರಾಮ ಕಾರಂತ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು, ಶಿಕ್ಷಕೇತರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಹಕರಿಸಿದರು.