ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಹಯೋಗ
ಪುತ್ತೂರು : ದ.ಕ.ಜಿ.ಪ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಈಜು ಸ್ಪರ್ಧೆ ಜು.15 ರಂದು ಪರ್ಲಡ್ಕ ಡಾ/ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ನಡೆಯಿತು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಈಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ “ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆಗಳನ್ನು ನೀಡಿದ ಡಾ/ಶಿವರಾಮಕಾರಂತರ ಕರ್ಮಭೂಮಿಯಲ್ಲಿ ಈಜು ಸ್ಪರ್ಧೆ ನಡೆಯುತ್ತಿದೆ.ಶಿವರಾಮ ಕಾರಂತರು ಮಕ್ಕಳಲ್ಲಿ ಭವಿಷ್ಯವನ್ನು ಕಂಡವರು ಹಾಗಾಗಿಯೇ ಅವರು ಮಕ್ಕಳಿಗೆ ಸಂಬಂಧಿಸಿದ ಅನೇಕ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು. ಮಕ್ಕಳ ಮನಸ್ಸಿಗೊಪ್ಪುವ ಬಾಲವನ ರೂಪುಗೊಳಿಸಿದರು. ಪ್ರಸ್ತುತ ಸರ್ಕಾರವೂ ಕೂಡ ಬಾಲವನದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸುವ ಅನೇಕ ಕಾರ್ಯಕ್ರಮಗಳ್ನು ಹಮ್ಮಿಕೊಂಡು ಬಂದಿದೆ. ಈಜು ಸ್ಪರ್ಧೆಯಲ್ಲಿ ಭಾಗವಹಿಸುವುದರ ಜೊತೆಗೆ ಸ್ಪರ್ಧಿಗಳು ಈ ಸ್ಥಳದ ವಿಶೇಷತೆಗಳ ಬಗೆಯೂ ತಿಳಿದುಕೊಳ್ಳುವ ಪ್ರಯತ್ನ ಮಾಡಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ “ಜಿಲ್ಲಾ ಮಟ್ಟದ ಕ್ರೀಡಾಕೂಟವೊಂದು ಪುತ್ತೂರು ತಾಲೂಕಿನಲ್ಲಿ ಅದರಲ್ಲೂ ಹಿರಿಯ ಸಾಹಿತಿ ಓಡಾಡಿದ ನೆಲದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ, ನಮ್ಮಲ್ಲಿ ಈಜು ಪ್ರವೀಣರ ಸಂಖ್ಯೆ ಕಡಿಮೆ ಇದೆ, ಈಜು ನಮ್ಮ ಜೀವನದ ಅನೇಕ ಭಾಗದಲ್ಲಿ ಬೇಕಾಗುತ್ತದೆ. ನಮ್ಮ ಜೀವ ರಕ್ಷಣೆಗೆ ಹಾಗೂ ಇನ್ನೊಬ್ಬರ ಜೀವ ರಕ್ಷಿಸಲು ಈಜು ಸಹಕಾರಿ.ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸುವ ಅವಶ್ಯಕತೆ ಅಗತ್ಯವಾಗಿದೆ ಆದ್ದರಿಂದ ಮಕ್ಕಳಿಗಾಗಿ ನಡೆಯುತ್ತಿರುವ ಈ ಈಜು ಸ್ಪರ್ಧೆ ಅತ್ಯಂತ ಪ್ರಸ್ತುತವಾಗಿದೆ”ಎಂದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್ ಎಂ ಮಾತನಾಡಿ” ಈಜು ಮನೋರಂಜನೆಯ ಜೊತೆಗೆ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸುತ್ತದೆ. ಭಾರತದಲ್ಲಿ ಈಜಿನ ಕುರಿತು ಇನ್ನಷ್ಟು ಮಾಹಿತಿ ನೀಡಿ ಪ್ರತ್ಸಾಹಿಸುವ ಕೆಲಸಗಳು ನಡೆಯಬೇಕಿದೆ ಆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಊರಿನ ಪ್ರತಿಭೆಗಳು ಮಿಂಚಲಿ’ ಎಂದರು.
ವೇದಿಕೆಯಲ್ಲಿ ಪುತ್ತೂರು ನಗರಸಭೆಯ ಸದಸ್ಯೆ ಯಶೋಧ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಎಸ್.ಆರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್. ಜೆ, ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರವಿನಾರಾಯಣ ಎಂ. ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ ಪ್ರಸ್ತಾವನೆಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಸ್ವಾಗತಿಸಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ವಂದಿಸಿದರು. ಶಿಕ್ಷಕಿ ವಾಣಿಶ್ರೀ ಎನ್. ನಿರೂಪಿಸಿದರು.