QR Code Business Card

ಕಾರ್ಗಿಲ್ ವಿಜಯೋತ್ಸವ ಹಾಗೂ ಭಾರತೀಯ ಸೈನ್ಯಕ್ಕೆ ಸೇರಿದ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನೆ

ಕಾರ್ಗಿಲ್‌ನಲ್ಲಿ ನಮ್ಮ ದೇಶ ಕಾಯುವ ಸಹೋದರರ ಪ್ರಾಣಾರ್ಪಣೆಯನ್ನು ಸದಾ ಸ್ಮರಿಸಿಕೊಳ್ಳಬೇಕು. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡಾಗ ಅವರ ತ್ಯಾಗ, ಬಲಿದಾನಗಳು ಸಾರ್ಥಕವೆನಿಸುತ್ತವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕರಾದ ಶ್ರೀ ರಘುರಾಜ್ ಉಬರಡ್ಕ ಹೇಳಿದರು.

ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 23ನೇ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಸೈನಿಕರ ಸಾಹಸದ ಜೊತೆಗೆ, ಮುಂದಿನ ಯುವ ಜನಾಂಗವಾಗುವ ವಿದ್ಯಾರ್ಥಿಗಳು ದೇಶ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶಿವಪ್ರಕಾಶ್.ಎಂ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಪ್ರಪಂಚದಾದ್ಯಂತ ಭಾರತದ ಸಂಸ್ಕೃತಿ, ಸನಾತನ ಧರ್ಮವನ್ನು ಪ್ರಸಾರ ಮಾಡಿದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳೋಣ. ಏಕ ಭಾರತ- ಸಮರ್ಥ ಭಾರತ ತತ್ವ ನಮ್ಮದಾಗಲಿ ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಸೇನಾನಿ ಶ್ರೀ ಎ.ವಿ.ಗೌಡ ಸೇನೆಗೆ ಸೇರಲು ಬೇಕಾಗುವ ದೈಹಿಕ, ಮಾನಸಿಕ ಹಾಗೂ ಶೈಕ್ಷಣಿಕ ಕ್ಷಮತೆಯ ಮಾಹಿತಿ ನೀಡಿದರು. ಸಹಶಿಕ್ಷಕಿ ಶ್ರೀಮತಿ ಪದ್ಮಲಕ್ಷ್ಮೀ ಕಾರ್ಗಿಲ್ ಕುರಿತಾದ ಸ್ವರಚಿತ ಕವನ ವಾಚಿಸಿದರು.

ವಿದ್ಯಾರ್ಥಿಗಳಾದ ಅಮೂಲ್ಯ ಹಾಗೂ ಪ್ರಣವಕೃಷ್ಣ ಕಾರ್ಗಿಲ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆ ಹಾಡಿದರು.

ಈ ಸಂದರ್ಭದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದು, ಇದೀಗ ಭಾರತೀಯ ನೌಕಾಪಡೆಯಲ್ಲಿ ತರಬೇತಿ ಪಡೆದು, ಭಾರತೀಯ ನೌಕ ಸೇನೆಯಲ್ಲಿ ಸೇವೆ ಸಲ್ಲಿಸಲಿರುವ ಹಿರಿಯ ವಿದ್ಯಾರ್ಥಿಗಳಾದ ಹೃತಿಕ್ (ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆ ಮತ್ತು ಶ್ರೀಮತಿ ಹರಿಣಾಕ್ಷಿ ದಂಪತಿ ಪುತ್ರ), ಚರಣ್ (ನಿವೃತ್ತ ಸೇನಾನಿ ಸಂಪ್ಯ ನಿವಾಸಿ ಜಯರಾಮ ಗೌಡ ಮತ್ತು ವಾರಿಜ ದಂಪತಿಗಳ ಪುತ್ರ) ಮತ್ತು ಪ್ರಜ್ವಲ್. ಎ.ವಿ.ಗೌಡ (ನಿವೃತ್ತ ಸೇನಾನಿ, ಪ್ರಸ್ತುತ ಸಿ.ಪಿ.ಸಿ.ಆರ್.ಐ,ವಿಟ್ಲದಲ್ಲಿ ಆಡಳಿತ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎ.ವಿ.ಗೌಡ ಮತ್ತು ವಾರಿಜ ದಂಪತಿಗಳ ಪುತ್ರ) ಇವರನ್ನು ಶಾಲೆಯ ವತಿಯಿಂದ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಅವನೀಶ್ ವಂದಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಸಾನ್ವಿ.ಡಿ, ಕುಮಾರಿ ಆತ್ಮಿಕಾ ಪ್ರಸಾದ್ ಹಾಗೂ ಶಿಕ್ಷಕಿ ಶ್ರೀಮತಿ ಅನುರಾಧ ಕಾರ್ಯಕ್ರಮ ನಿರೂಪಿಸಿದರು.