ಪುತ್ತೂರು: ಜುಲೈ 13. ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಶೈಕ್ಷಣಿಕ ಸಹಮಿಲನ 2013-14 ಒಂದು ದಿನದ ಕಾರ್ಯಾಗಾರ ‘ಯಾದವಶ್ರೀ ಸಭಾಂಗಣ’ ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ನಡೆಯಿತು. ಶ್ರೀ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಆಧ್ಯಾತ್ಮ ಹಾಗೂ ಆದರ್ಶ ತತ್ವಗಳಿಂದ ಪ್ರೇರಿತವಾದ ಶಿಕ್ಷಣವು ವಿದ್ಯಾಭಾರತಿ ಸಂಸ್ಥೆಗಳಿಂದ ದೊರೆಯುತ್ತಿರುವುದು ಶ್ಲಾಘನೀಯ ಎಂದರು. ಆದರ್ಶಗಳು ವಿಚಾರಗಳು ಎಂದೂ ಸಾಯುವುದಿಲ್ಲ ಕನಸು ಕಾಣಬೇಕು. ಕನಸು ಕಂಡಾಗ ವಿಚಾರಗಳು ಬರುತ್ತವೆ. ವಿಚಾರಗಳು ತಿಳಿದಾಗ ವ್ಯವಹಾರಗಳು ಉತ್ತಮವಾಗುತ್ತವೆ. ವಿಚಾರ ವ್ಯವಹಾರಗಳನ್ನು ತಿಳಿದು ಮಕ್ಕಳಿಗೆ ಕೊಡಬೇಕೆಂದು ಹೇಳಿದರು.
ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಶ್ರೀ ಎಸ್.ಆರ್. ರಂಗಮೂರ್ತಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡುತ್ತಾ ವ್ಯಕ್ತಿ ಮತ್ತು ವ್ಯಕ್ತಿತ್ವ ನಿರ್ಮಾಣ ಮಾಡುವುದು ಶಿಕ್ಷಣದ ಧ್ಯೇಯ. ಅದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಜಿಲ್ಲೆಯ ಎಲ್ಲಾ ವಿದ್ಯಾಭಾರತಿ ಶಿಕ್ಷಕರು ಒಂದಾಗಿ ಬೆರೆತು ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಂತೆ ಕರೆಕೊಟ್ಟರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಕೆ.ಎಂ ಕೃಷ್ಣ ಭಟ್, ಸಂಚಾಲಕ ಶ್ರೀ ರವೀಂದ್ರ.ಪಿ, ದ.ಕ.ಜಿಲ್ಲಾ ವಿದ್ಯಾಭಾರತಿ ಅಧ್ಯಕ್ಷ ಶ್ರೀ ಎಂ.ಬಿ.ಪುರಾಣಿಕ್, ಕಾರ್ಯದರ್ಶಿ ಶ್ರೀ ವಸಂತ ಮಾಧವ ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಉರಿಮಜಲು ಶ್ರೀ ರಾಮ ಭಟ್ ಮಾಜಿ ಶಾಸಕರು ಪುತ್ತೂರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ, ವಿವಿಧ ಶಾಲಾ ಮುಖ್ಯಗುರುಗಳು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು, ಆಡಳಿತ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ವಸಂತ ಮಾಧವ ಸ್ವಾಗತಿಸಿ, ಶ್ರೀಮತಿ ಆಶಾ ಬೆಳ್ಳಾರೆ ವಂದಿಸಿದರು. ಶಿಕ್ಷಕ ರಾಜೇಶ್ ನೆಲ್ಲಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.